ಚಿಕ್ಕಬಳ್ಳಾಪುರ, ಜೂ.2- ತಡರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರೀ ಬಿರುಗಾಳಿ ಮಳೆಗೆ ಚಿಕ್ಕಬಳ್ಳಾಪುರದಿಂದ ಗಂಗರೆ ಕಾಲುವೆಗೆ ಹೋಗುವ ರಸ್ತೆಯ ರೇಣುಕನಹಳ್ಳಿ ಸಮೀಪ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿತ್ತು.
ವಿವಿಧೆಡೆ ಉತ್ತಮ ಮಳೆಯಾಗಿದ್ದು, ನಗರದಲ್ಲೂ ಸಹ ಮಳೆಯ ಆರ್ಭಟ ಜೋರಾಗಿತ್ತು. ಚಿಕ್ಕಬಳ್ಳಾಪುರದಿಂದ ಗಂಗರೆ ಕಾಲುವೆಗೆ ಹೋಗುವ ಮಾರ್ಗದಲ್ಲಿ ಮರದ ದೊಡ್ಡ ಟೊಂಗೆ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ವಾಹನದ ಮೇಲೆ ಬಿದ್ದು ವಾಹನದ ಸ್ವಲ್ಪ ಭಾಗ ಜಖಂಗೊಂಡಿದೆ.
ರಾತ್ರಿ ವೇಳೆ ಈ ಘಟನೆ ಆದ ಾರಣ ರಸ್ತೆಯಲ್ಲಿ ಅಷ್ಟಾಗಿ ಸಂಚಾರ ಇಲ್ಲದೆ ಇದ್ದ ಪರಿಣಾಮ ಯಾವುದೇ ಹೆಚ್ಚಿನ ಅನಾಹುತ ಆಗಿಲ್ಲ. ಸದ್ಯ ರಸ್ತೆಗೆ ಮರದ ದೊಡ್ಡ ಟೊಂಗೆ ಮುರಿದು ಬಿದ್ದಿದ್ದು, ಇಂದು ಬೆಳಿಗ್ಗೆ 7 ಗಂಟೆಯಾದರೂ ಉರುಳಿ ಬಿದ್ದ ಮರ ತೆರವು ಗೊಳಿಸುವ ಕಾರ್ಯ ನಡೆದಿಲ್ಲ. ಹೀಗಾಗಿ ಸಂಚಾರ ಸ್ಥಗಿತಗೊಂಡು ವಿವಿಧ ಕಡೆಗಳಿಂದ ಹೋಗಿ ಬರುವವರಿಗೆ ತೊಂದರೆ ಉಂಟಾಗಿತ್ತು.