ಬೆಂಗಳೂರು, ಆ.7- ಪ್ರತಿದಿನ ನಗರ ಸಂಚಾರಿ ಪೊಲೀಸರು ವಾಹನ ಸವಾರರು ಹಾಗೂ ಚಾಲಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿದ್ದರೂ ಇತ್ತ ಮೂವರು ಪುಂಡರು ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಾ ಮದ್ಯ ಸೇವಿಸುತ್ತಾ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಅಟ್ಟಹಾಸ ಮೆರೆದಿದ್ದಾರೆ.
ಮೂವರು ಯುವಕರು ಕಬ್ಬನ್ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂಜಿ ರಸ್ತೆ ಬಳಿ ಒಂದೇ ಬೈಕ್ನಲ್ಲಿ ಹೆಲ್ಮೆಟ್ ಧರಿಸದೇ ನಿಯಮ ಉಲ್ಲಂಸಿ ಸಂಚರಿಸಿದ್ದಲ್ಲದೆ ಮದ್ಯದ ಬಾಟಲಿ ಹಿಡಿದು ದಾರಿಯುದ್ದಕ್ಕೂ ಸೇವನೆ ಮಾಡುತ್ತಾ ಹೋಗುತ್ತಿರುವುದು ಕಂಡು ಬಂದಿದೆ. ಬೈಕ್ನಲ್ಲಿ ಹೋಗುತ್ತಿದ್ದ ಮೂವರು ಯುವಕರ ಪೈಕಿ ಒಬ್ಬ ಮದ್ಯ ಇರುವ ಗ್ಲಾಸ್ ಹಾಗೂ ಮತ್ತೊಬ್ಬ ಬಿಯರ್ ಬಾಟಲಿ ಹಿಡಿದು ಮದ್ಯ ಸೇವಿಸಿರುವುದು ಕಂಡು ಬಂದಿದೆ.
ಮದ್ಯಪಾನ ಮಾಡಿಕೊಂಡೇ ತ್ರಿಬಲ್ ರೈಡಿಂಗ್ ಹೋಗಿದ್ದಲ್ಲದೆ, ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಾ ಜಾಲಿ ರೈಡ್ ಮಾಡಿದ್ದಾರೆ. ಇದನ್ನು ಗಮನಿಸಿದ ಕಾರು ಚಾಲಕರೊಬ್ಬರು ಈ ಮೂವರ ಪುಂಡಾಟವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಈ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಈ ದೃಶ್ಯಾವಳಿಯನ್ನು ಗಮನಿಸಿದ ಕಬ್ಬನ್ಪಾರ್ಕ್ ಸಂಚಾರಿ ಠಾಣೆ ಪೊಲೀಸರು ವಿಡಿಯೋದಲ್ಲಿ ಸೆರೆಯಾಗಿರುವ ಬೈಕ್ ಹಾಗೂ ಸವಾರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಹುಶಃ ಈ ಘಟನೆ ಎಂಜಿ ರಸ್ತೆಯಲ್ಲಿ ನಡೆದಿರುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆಯಾದರೂ ಈ ಮೂವರಿಗಾಗಿ ಸಂಚಾರಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.