ತುಮಕೂರು,ಮಾ.23- ಕಾರಿನಲ್ಲಿ ಮೂವರು ವ್ಯಕ್ತಿಗಳು ಸಜೀವ ದಹನವಾಗಿರುವ ಘಟನೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿರಬಹುದೆಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಮೃತರನ್ನು ಬೆಳ್ತಂಗಡಿ ತಾಲ್ಲೂಕಿನ ಟಿ.ಬಿ ಕ್ರಾಸ್ ನಿವಾಸಿಗಳಾದ ಆಟೋ ಚಾಲಕ ಸಾಹುಲ್(45), ಮದ್ದಡ್ಕ ನಿವಾಸಿ ಇಸಾಕ್(56), ಶಿರ್ಲಾಲ್ ನಿವಾಸಿ ಇಮ್ತಿಯಾಜ್(34) ಎಂದು ಗುರುತಿಸಲಾಗಿದೆ. ತುಮಕೂರು ತಾಲ್ಲೂಕಿ ಕುಚ್ಚಂಗಿ ಕೆರೆಯ ಅಂಗಳದಲ್ಲಿ ನಿನ್ನೆ ಸಂಜೆ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿದೆ.
ಸುದ್ದಿ ತಿಳಿದು ಕೋರಾ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರನ್ನು ಪರಿಶೀಲಿಸಿದಾಗ ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿ ಮೂವರ ಶವಗಳು ಕಂಡು ಪೊಲೀಸರು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ದುಷ್ಕರ್ಮಿಗಲು ಈ ಮೂವರನ್ನು ಬೇರೆಡೆ ಕೊಲೆ ಮಾಡಿ ನಂತರ ಕಾರಿನೊಳಗೆ ಮೃತದೇಹಗಳನ್ನು ತಂದು ಮೊನ್ನೆ ರಾತ್ರಿ ಈ ಜಾಗದಲ್ಲಿ ಕಾರನ್ನು ನಿಲ್ಲಿಸಿ ಬೆಂಕಿ ಹಚ್ಚಿ ಪರಾರಿಯಾಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಇಲ್ಲವೇ ಕಾರಿಗೆ ಬೆಂಕಿ ಹಚ್ಚಿ ಕೆರೆಯ ಅಂಗಳಕ್ಕೆ ತಳ್ಳಿರಬಹುದೆಂದು ಅನುಮಾನ ಸಹ ವ್ಯಕ್ತವಾಗಿದೆ. ಪೊಲೀಸರು ಸ್ಥಳದಲ್ಲಿದ್ದ ಮಾರುತಿ ಎಕ್ಸ್‍ಪ್ರೆಸ್ ಕಾರಿನ ನಂಬರ್ ಪರಿಶೀಲಿಸಿದಾಗ ಅದು ದಕ್ಷಿಣ ಕನ್ನಡ ಮೂಲದ ರಫಿಕ್ ಎಂಬುವರಿಗೆ ಸೇರಿದೆ ಎಂಬುದು ಗೊತ್ತಾಗಿದೆ.
ಸ್ಥಳಕ್ಕೆ ಎಸ್‍ಪಿ ಅಶೋಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರಿನಲ್ಲಿದ್ದವರು ಬೆಳ್ತಂಗಡಿ ತಾಲ್ಲೂಕಿನವರು. ಇವರೇಕೆ ತುಮಕೂರಿಗೆ ಬಂದಿದ್ದರು. ಹಣಕಾಸಿನ ವಿಚಾರಕ್ಕೆ ಈ ಕೃತ್ಯ ನಡೆದಿರಬಹುದೇ, ಇಲ್ಲವೇ ವೈಷಮ್ಯದಿಂದ ಇಷ್ಟೊಂದು ಭೀಕರವಾಗಿ ಕೊಲೆ ಮಾಡಿರಬಹುದೇ ಎಂಬ ಹಲವಾರು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರಿನಲ್ಲಿ ನಂಬರಿನ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ರಚಿಸಲಾಗಿರುವುದು ಎರಡು ವಿಶೇಷ ತಂಡಗಳ ಪೈಕಿ ಒಂದು ತಂಡ ಬೆಳ್ತಂಗಡಿಗೆ ಹೋಗಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.