Thursday, May 9, 2024
Homeರಾಜಕೀಯರಾಜ್ಯದಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲೂ ಕೂಡ ಗೆಲ್ಲಲ್ಲ : ವಿಜಯೇಂದ್ರ ಭವಿಷ್ಯ

ರಾಜ್ಯದಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲೂ ಕೂಡ ಗೆಲ್ಲಲ್ಲ : ವಿಜಯೇಂದ್ರ ಭವಿಷ್ಯ

ಬೆಂಗಳೂರು,ಮಾ.23- ಪ್ರಧಾನಿ ನರೇಂದ್ರಮೋದಿ ಅವರ ಜನಪ್ರಿಯತೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವೇ ಇಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಹೋಟೆಲ್ ಜಿ.ಎಂ. ರಿಜಾಯ್ಸ್ ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ. ಮೋದಿ ಜನಪ್ರಿಯತೆ ಮುಂದೆ ಈ ಬಾರಿ ಯಾವ ರಾಜಕೀಯ ಪಕ್ಷಗಳ ಆಟಗಳು ನಡೆಯುವುದಿಲ್ಲ ಎಂದು ಹೇಳಿದರು.

ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಂಕಲ್ಪದೊಂದಿಗೆ ಕೇಂದ್ರದ ಮೋದಿಯವರ ನೇತೃತ್ವದ ಸರಕಾರ ಜನಪರ ಯೋಜನೆಗಳನ್ನು ನೀಡಿದೆ. ಹಾಗಾಗಿ ಮೋದಿ ಮತ್ತೊಮ್ಮೆ ಎಂಬ ಘೋಷಣೆ ದೇಶಾದ್ಯಂತ ಕೇಳಿಸುತ್ತಿದೆ ಎಂದು ತಿಳಿಸಿದರು.

ಕರ್ನಾಟಕವು ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಎಂಬುದನ್ನು ನಾವು ಮತ್ತೆ ಸಾಬೀತು ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ನಿಷ್ಕ್ರಿಯವಾಗಿದೆ. ಅದು ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ಎಚ್ಚತ್ತುಕೊಳ್ಳದೆ ಇರುವುದು ನಿಜಕ್ಕೂ ದುರಂತವೇ ಸರಿ ಎಂದರು.

370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದು ಸೇರಿ ಅನೇಕ ಕಾರ್ಯಗಳು ನಡೆದಿವೆ. ಮೂಲಭೂತ ಸೌಕರ್ಯ ನೀಡಲು ಕೇಂದ್ರ ಸರಕಾರ ಶ್ರಮಿಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ದೇಶ ಮಾತ್ರವಲ್ಲದೆ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಮೋದಿ ಸರಕಾರ ಎಂಬ ಅಭಿಪ್ರಾಯ ಸರ್ವಸಾಮಾನ್ಯವಾಗಿದೆ. ಎಲ್ಲ ಕಡೆಗಳಲ್ಲಿ ಅದನ್ನು ಕೇಳುವಂತಾಗಿದೆ ಎಂದು ಹೇಳಿದರು.

ನದಿಗಳಲ್ಲಿ ನೀರಿಲ್ಲ ಹೇಳಿಕೆ;
ಕುಡಿಯುವ ನೀರಿನ ಹಾಹಾಕಾರ ಇದೆ ಎಂದು ತಿಳಿಸಿದ್ದನ್ನು ಗಮನಿಸಿದ್ದೇನೆ. ಈ ಹಿಂದೆ ಯಾವತ್ತು ಕಾವೇರಿ ನೀರನ್ನು ತಮಿಳುನಾಡಿಗೆ ಯಥೇಚ್ಛವಾಗಿ ಹರಿಸುತ್ತಿದ್ದರೋ ಆಗಲೇ ಕಾಂಗ್ರೆಸ್ ಸರಕಾರ- ಮುಖ್ಯಮಂತ್ರಿಗಳಿಗೆ ಜ್ಞಾನೋದಯ ಆಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇಂದು ನೀರಿಗಾಗಿ ಹಾಹಾಕಾರ ಇರುತ್ತಿರಲಿಲ್ಲ ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ಸುನೀಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಾಜಿ ಶಾಸಕ ಎಸ್.ಎ. ರಾಮದಾಸ್, ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ್, ರಾಜ್ಯ ವಕ್ತಾರರಾದ ಅಶೋಕ್ ಗೌಡ, ಹೆಚ್.ಎನ್. ಚಂದ್ರಶೇಖರ್, ಸುರಭಿ ಹೋದಿಗೆರೆ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಮತ್ತು ರಾಜ್ಯ ಮಾಧ್ಯಮ ಸಹ-ಸಂಚಾಲಕ ಪ್ರಶಾಂತ್ ಕೆಡೆಂಜಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

Latest News