Wednesday, May 22, 2024
Homeರಾಜ್ಯಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ

ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ

ಬೆಂಗಳೂರು,ಮಾ.19- ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ತರುಣ್ ಮತ್ತು ಜಾಹಿದ್ ಬಂಧಿತ ಆರೋಪಿಗಳು. ನಿನ್ನೆ ಕುಂಬಾರಪೇಟೆಯ ಸುಲೇಮಾನ್, ಶಹಾನವಾಜ್ ಮತ್ತು ರೋಹಿತ್ನನ್ನು ಬಂಧಿಸಿದ್ದು, ಇದೀಗ ಮತ್ತಿಬ್ಬರನ್ನು ಬಂಧಿಸುವ ಮೂಲಕ ಆರೋಪಿಗಳ ಸಂಖ್ಯೆ ಐದಕ್ಕೆ ಏರಿದೆ.

ನಗರ್ತಪೇಟೆಯ ಸಿದ್ದಣ್ಣಗಲ್ಲಿಯಲ್ಲಿನ ಮೊಬೈಲ್ ಅಂಗಡಿ ಮಾಲೀಕ ಮುಖೇಶ್ ಮೊನ್ನೆ ಸಂಜೆ ಹಿಂದಿ ಭಜನೆ ಹಾಕಿದ್ದಾಗ ಧ್ವನಿ ವರ್ಧಕ ಶಬ್ದ ಜೋರಾಗಿ ಕೇಳಿಸುತ್ತಿದೆಯೆಂದು ಗುಂಪೊಂದು ಏಕಾಏಕಿ ಅಂಗಡಿ ಬಳಿ ಹೋಗಿ ನೀವು ಹಾಕಿದ ಹಾಡಿನಿಂದ ಪ್ರಾರ್ಥನೆ ನಡೆಸಲು ತೊಂದರೆಯಾಗುತ್ತಿದೆ, ಹಾಡನ್ನು ನಿಲ್ಲಿಸುವಂತೆ ಮುಖೇಶ್ ಜೊತೆಗೆ ಜಗಳವಾಡಿ ಅವರನ್ನು ಅಂಗಡಿಯಿಂದ ಹೊರಗೆಳೆದು ಕೈಗಳಿಂದ ಮುಖಕ್ಕೆ ಗುದ್ದಿ ದೊಣ್ಣೆಯಿಂದ ಹೊಡೆದು ಪರಾರಿಯಾಗಿತ್ತು. ಹಲ್ಲೆಗೊಳಗಾದ ಮುಖೇಶ್ ಅವರು ಪೊಲೀಸರಿಗೆ ದೂರು ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಅಂದು ಘಟನೆ ಖಂಡಿಸಿ ನಗರ್ತಪೇಟೆಯ ನೂರಾರು ವರ್ತಕರು ಹಲಸೂರು ಗೇಟ್ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿ, ಹಲ್ಲೆ ನಡೆಸಿದ ಪುಂಡರನ್ನು ಆದಷ್ಟು ಬೇಗ ಬಂಧಿಸಬೇಕೆಂದು ಒತ್ತಾಯಿಸಿದ್ದರು. ಹಲಸೂರು ಗೇಟ್ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಆ ರಸ್ತೆಗಳಲ್ಲಿನ ಸಿಸಿ ಟಿವಿ ಪರಿಶೀಲಿಸಿ ಅದರಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ನಿನ್ನೆ ಮೂವರು ಹಾಗೂ ಇದೀಗ ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಆರೋಪಿಗಳ ಪೈಕಿ ಸುಲೇಮಾನ್ ವಿರುದ್ಧ ಅಪಹರಣ ಹಲ್ಲೆ, ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದು, ನಂತರದ ದಿನಗಳಲ್ಲಿ ಬಿಡುಗಡೆಯಾಗಿದ್ದನು. ಉಳಿದ ಆರೋಪಿಗಳ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾದ ಹಲ್ಲೆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮತ್ತೊಂದೆಡೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಹಾಗೂ ಮುಖಂಡರು, ಕಾರ್ಯಕರ್ತರು ಘಟನಾ ಸ್ಥಳಕ್ಕೆ ಹೋಗಿ ಮುಖೇಶ್ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಶೀಘ್ರ ಎಲ್ಲ ಆರೋಪಿಗಳನ್ನು ಬಂಸದಿದ್ದರೆ ನಗರ್ತಪೇಟೆ ಬಂದ್ ಮಾಡುವುದಾಗಿ ಎಚ್ಚರಿಸಿದ್ದರು.

RELATED ARTICLES

Latest News