Tuesday, July 16, 2024
Homeರಾಜ್ಯರಾಜ್ಯದಲ್ಲಿ ಡೆಂಘೀಗೆ ಮತ್ತಿಬ್ಬರು ಬಲಿ

ರಾಜ್ಯದಲ್ಲಿ ಡೆಂಘೀಗೆ ಮತ್ತಿಬ್ಬರು ಬಲಿ

ಬೆಂಗಳೂರು,ಜು.7- ರಾಜ್ಯದಲ್ಲಿ ಮಹಾಮಾರಿ ಡೆಂಘೀ ಅಬ್ಬರ ಜೋರಾಗಿದ್ದು, ಅದರಲ್ಲೂ ಮಕ್ಕಳೇ ಬಲಿಯಾಗುತ್ತಿದ್ದು, ಗದಗ ಜಿಲ್ಲೆಯಲ್ಲಿ ಬಾಲಕನೊಬ್ಬ ಸೋಂಕಿಗೆ ಮೃತಪಟ್ಟಿದ್ದರೆ, ಹಾಸನ ಜಿಲ್ಲೆಯಲ್ಲಿ ಯುವತಿಯೊಬ್ಬಳು ಬಲಿಯಾಗಿದ್ದು, ಆತಂಕ ಹೆಚ್ಚಿಸಿದೆ.ಹಾಸನ ಜಿಲ್ಲೆಯಲ್ಲಿ ಇದುವರೆಗೂ ನಾಲ್ವರು ಮಕ್ಕಳು ಮೃತಪಟ್ಟಿದ್ದು, ಇದೀಗ ಯುವತಿಯೊಬ್ಬಳು ಬಲಿಯಾಗಿರುವ ಘಟನೆ ವರದಿಯಾಗಿದೆ.

ಹಾಸನ ಜಿಲ್ಲೆಯಲ್ಲಿ ಇದುವರೆಗೆ ಐವರು ಸಾವನ್ನಪ್ಪಿದ್ದು, ನಿಯಂತ್ರಣಕ್ಕೆ ಜಿಲ್ಲಾಡಳಿತ ಹರಸಾಹಸ ಪಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. 224 ಮಂದಿಗೆ ಸೋಂಕು ಪತ್ತೆಯಾಗಿದೆ.ಹೆಚ್ಚಾಗಿ ಮಕ್ಕಳೇ ಶಂಕಿತ ಸೋಂಕಿಗೆ ಬಲಿಯಾಗಿದ್ದಾರೆ. ಗದಗ ತಾಲೂಕಿನ ಶಿರುಂಜ ಗ್ರಾಮಕ್ಕೂ ಸಹ ಸೋಂಕು ಆವರಿಸಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ 5 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ತೀವ್ರತರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಗದಗದ ಜಿಮ್ಸೌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.ನಿನ್ನೆ ಒಂದೇ ದಿನ 175 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ 115 ಜನರಿಗೆ ಡೆಂಘೀ ಪತ್ತೆಯಾಗಿದೆ.ರಾಜ್ಯದಲ್ಲಿ ಇದುವರೆಗೆ 7 ಸಾವಿರ ಜನರಿಗೆ ಡೆಂಘೀ ಸೋಂಕು ತಗುಲಿದ್ದು, ಜನರಲ್ಲಿ ತೀವ್ರ ಆತಂಕ ಮನೆಮಾಡಿದೆ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಡೆಂಘೀ ಹರಡುವ ಪ್ರದೇಶಗಳಲ್ಲಿ ಲಾರ್ವಾ ಸರ್ವೆ ಮಾಡಲಾಗುತ್ತಿದ್ದು, ಲಾರ್ವಾ ಸೊಳ್ಳೆ ನಾಶಕ್ಕೆ ಫಾಗಿಂಗ್ ಮಾಡಲಾಗುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲೂ ಸಹ ಸೊಳ್ಳೆಗಳ ನಿಯಂತ್ರಣಕ್ಕೆ ಪಾಲಿಕೆ ಅಗತ್ಯ ಕ್ರಮ ಕೈಗೊಂಡಿದ್ದು, ದಿನಕ್ಕೆ 2-3 ಬಾರಿ ಫಾಗಿಂಗ್ ಮಾಡಲಾಗುತ್ತಿದೆ.

ಯಾವುದೇ ಕಾರಣಕ್ಕೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮ ವಹಿಸಿ, ಸೊಳ್ಳೆಗಳ ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ. ಆದಷ್ಟು ಮಕ್ಕಳನ್ನು ಸುರಕ್ಷತೆಯಿಂದ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

RELATED ARTICLES

Latest News