ಬಿಜಾಪುರ, ಡಿ.13 (ಪಿಟಿಐ) – ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು ಭದ್ರತಾ ಸಿಬ್ಬಂದಿ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೇಂದ್ರ ಮತ್ತು ಪುನ್ನೂರು ಗ್ರಾಮಗಳ ಅರಣ್ಯದಲ್ಲಿ ಬೆಳಗ್ಗೆ ಭದ್ರತಾ ಸಿಬ್ಬಂದಿಯ ತಂಡ ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಪಿಟಿಐಗೆ ತಿಳಿಸಿದ್ದಾರೆ.
ಗುಂಡಿನ ಚಕಮಕಿ ನಿಂತ ನಂತರ, ಇಬ್ಬರು ನಕ್ಸಲೀಯರ ಶವಗಳು, 12 ಬೋರ್ ರೈಫಲ್ ಮತ್ತು ಇತರ ಮಾವೋವಾದಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಘಟನೆಯೊಂದಿಗೆ, ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಛತ್ತೀಸ್ಗಢದ ಬಸ್ತಾರ್ ವಿಭಾಗದಲ್ಲಿ ಪ್ರತ್ಯೇಕ ಎನ್ಕೌಂಟರ್ಗಳ ನಂತರ ಈ ವರ್ಷ ಇದುವರೆಗೆ 217 ನಕ್ಸಲೀಯರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತಿಚೆಗೆ ನಾರಾಯಣಪುರ ಜಿಲ್ಲೆಯ ದಕ್ಷಿಣ ಅಬುಜದ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಏಳು ನಕ್ಸಲೀಯರು ಹತರಾಗಿದ್ದರು.