ನವದೆಹಲಿ,ಫೆ.1- ಮುಂದಿನ 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು 120 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಘೋಷಿಸಿದ್ದಾರೆ.
2025-26ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ ಅವರು, ಭಾರತ ಸರ್ಕಾರ 120 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದೆ. ಈ ವಿಮಾನ ನಿಲ್ದಾಣಗಳು ಮುಂದಿನ 10 ವರ್ಷಗಳಲ್ಲಿ 4 ಕೋಟಿ ಹೆಚ್ಚುವರಿ ಪ್ರಯಾಣಿಕರನ್ನು ನಿರ್ವಹಣೆ ಮಾಡಲಿವೆ ಎಂದು ಹೇಳಿದರು.
ಈಗಾಗಲೇ ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ಘೋಷಣೆ ಮಾಡಿದ್ದು, ಹೊಸ ಉಡಾನ್ ಯೋಜನೆಯನ್ನು ಸಹ ಜಾರಿಗೆ ತರಲಾಗುತ್ತದೆ. ಈ ಮೂಲಕ ಎರಡು ಮತ್ತು 3ನೇ ಹಂತದ ನಗರಗಳಿಗೆ ಸಹ ವಿಮಾನ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜನ ಸಾಮಾನ್ಯರು ಸಹ ವಿಮಾನದಲ್ಲಿ ಹಾರಾಡಲು ಅನುಕೂಲವಾಗಬೇಕು ಎಂದು ಅಕ್ಟೋಬರ್ 21, 2016ರಂದು ಉಡಾನ್ ಯೋಜನೆಯನ್ನು ಘೋಷಣೆ ಮಾಡಿತ್ತು. ಉಡೇ ದೇಶ್ ಕಾ ಆಮ್ ನಾಗರೀಕ್ ಎನ್ನುವ ಘೋಷಣೆಯೊಂದಿಗೆ ಈ ಯೋಜನೆ ಆರಂಭಿಸಲಾಯಿತು.
ನಾಗರಿಕ ವಿಮಾನಯಾನ ಸಚಿವಾಲಯ ದೇಶಾದ್ಯಂತ ವಿಮಾನಗಳ ಮೂಲಕ ಪ್ರಾದೇಶಿಕ ವಾಯು ಸಂಪರ್ಕವವನ್ನು ಜನಸಾಮಾನ್ಯರ ಕೈಗೆಟುಕುವಂತೆ ಮಾಡಲು ಈ ಯೋಜನೆ ಜಾರಿಗೊಳಿಸಿತು. ಯೋಜನೆ ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಸುಧಾರಿಸಲು ಸಹಾಯಕವಾಗಿದೆ ಎಂದರು.
ಉಡಾನ್ ಯೋಜನೆ ಮಾರುಕಟ್ಟೆ, ವಿಮಾನಯಾನ ಸಂಸ್ಥೆಗಳ ಬೇಡಿಕೆಯಂತೆ ನಿರ್ದಿಷ್ಟ ಮಾರ್ಗಗಳಲ್ಲಿ ವಿಮಾನ ಹಾರಾಟವಾಗಬೇಕು ಎಂಬ ಬೇಡಿಕೆಯನ್ನು ತೀರ್ಮಾನಿಸುತ್ತದೆ. ಯೋಜನೆಯು ವಿಮಾನ ನಿಲ್ದಾಣ ನಿರ್ವಾಹಕರು, ರಾಜ್ಯ ಸರ್ಕಾರಗಳು ಒದಗಿಸುವ ವಿವಿಧ ರಿಯಾಯಿತಿಗಳ ಮೂಲಕ ವಿಮಾನ ಸೇವೆಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು.