ದೊಡ್ಡಬಳ್ಳಾಪುರ,ಏ.8- ರಾಗಿ ಖರೀದಿಯಲ್ಲಿನ ಅವ್ಯವಸ್ಥೆಯನ್ನೇ ಬಂಡವಾಳ ಮಾಡಿಕೊಂಡ ಟ್ರ್ಯಾಕ್ಟರ್ ಮಾಲೀಕರು ರೈತರಿಂದ ದುಪ್ಪಟ್ಟು ಬಾಡಿಗೆ ವಸೂಲಿ ಮಾಡುವ ಮೂಲಕ ಶೋಷಣೆಗೆ ಇಳಿದಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ದೊಡ್ಡಬಳ್ಳಾಪುರದ ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರ, ವೇಬ್ರ್ಜಿ್, ಗೋಡೌನಿಗೆ ಭೇಟಿ ನೀಡಿದ ಅವರು ರೈತರ ಸಮಸ್ಯೆಗಳನ್ನು ಆಲಿಸಿದರು. ರಾಗಿ ಖರೀದಿ ಕೇಂದ್ರದ ಬಳಿ ಇದ್ದ ರೈತರಿಗೆ ಆಗುತ್ತಿರುವ ವಿಳಂಬ, ಕುಳಿತು ಕೊಳ್ಳಲು ಆಸನದ ವ್ಯವಸ್ಥೆ ಇಲ್ಲದೆ ಇರುವುದು, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಲ್ಲದೆ ನೋಂದಣಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೂ ಶೌಚಾಲಯದ ಸಮಸ್ಯೆ ತಿಳಿದು ಸಿಡಿಮಿಡಿಗೊಂಡ ಉಪಲೋಕಾಯುಕ್ತ ಬಿ.ವೀರಪ್ಪ ಅವರು, ಉಪವಿಭಾಗಾಧಿಕಾರಿ ದುರ್ಗಾಶ್ರೀ ಮತ್ತು ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರನ್ನು ತರಾಟೆಗೆ ತೆಗೆದುಕೊಂಡರು.
ನೀವಿಬ್ಬರು ಹೆಣ್ಣು ಮಕ್ಕಳಾಗಿದ್ದೀರಿ, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಣ್ಣು ಮಕ್ಕಳ ಸಮಸ್ಯೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದರು. ಅಲ್ಲದೆ ಖರೀದಿ ಕೇಂದ್ರದ ಅಧಿಕಾರಿಗಳು ನೌಕರರಿಗೆ ವೇತನ ನೀಡಿಲ್ಲ, ಸಂಬಳ ಬಂದಿಲ್ಲ ಅಂದ್ರೆ ಅವರು ಏನ್ ತಿನ್ನಬೇಕು, ಇವರನ್ನು ಯಾವ ಆಧಾರದಲ್ಲಿ ನೇಮಕ ಆಗಿದೆ ಕೂಡಲೇ ಈ ಕುರಿತು ವರದಿ ನೀಡಿ ಎಂದು ಹೇಳಿದರು.
ಅಧಿಕಾರಿಗಳ ಬೇಜವಾಬ್ದಾರಿ, ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಭಾರೀ ಮೋಸವಾಗುತ್ತಿದೆ. ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳಿ ಕಡೆಗೆ ಅದಕ್ಕೂ ನಮಗೂ ಯಾವ ಸಂಬಂಧವಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇಲ್ಲಿ ಹೆಜ್ಜೆ ಹೆಜ್ಜೆಗೂ ರೈತರಿಗೆ ತೊಂದರೆ ಕೊಡ್ತಿದಾರೆ,ಯಾರೋ ಬಂದು ಯಲ್ಲಮನ ಜಾತ್ರೆ ಮಾಡ್ಕೊಂತಿದ್ದಾರೆ.ಇಲ್ಲಿ ಏನೇನ್ ವ್ಯವಹಾರ ನಡೀತಿದೆ ಅನ್ನೋದು ನನಗೆ ಚೆನ್ನಾಗಿ ಗೊತ್ತಾಗಿದೆ.ಹೀಗಾಗಿ ನಾನು ಸ್ವಯಂ ಪ್ರೇರಿತ( ಸುಮೋಟೊ) ಕೇಸ್ ದಾಖಲು ಮಾಡಿಕೊಳ್ಳುತಿದ್ದೇವೆ.ಇಲ್ಲಿ ಯಾರನ್ನು ಬಿಡೊ ಪ್ರಶ್ನೆನೇ ಇಲ್ಲ,ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಇಡೀ ಎಪಿಎಂಸಿಯನ್ನ ಸುತ್ತಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ,ಮಂಡಿಗಳಲ್ಲಿ ತೂಕದ ಯಂತ್ರಗಳನ್ನ ಪರಿಶೀಲನೆ ಮಾಡಿದರು, ಲೈಸ್ಸೆ್ ಪ್ರದರ್ಶನ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ರೈತರಿಂದ ಯಾವುದೇ ರೀತಿಯ ಕಮಿಷನ್ ಪಡೆಯೋ ಹಾಗಿಲ್ಲ.ಇಲ್ಲಿ 10 ಪರ್ಸೆಂಟ್ ತಗೋಳ್ತಿದಾರೆ ಅಂತ ದೂರಿದೆ,ಇನೇಲೆ ಇದೆಲ್ಲ ನಿಲ್ಲ ಬೇಕು ಎಂದು ಎಚ್ಚರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಪವನ್ ನೆಜ್ಜೂರ್, ಡಿವೈಎಸ್ಪಿ ವೆಂಕಟೇಶ್, ಇ್ಸ್‌ಪೆಕ್ಟರ್ ರಮೇಶ್, ಚಂದ್ರಕಾಂತ್, ನಂದಕುಮಾರ್, ಹಾಲಪ್ಪ ಬಾಲದಂಡಿ, ಉಮಾಮಹೇಶ್, ಸಿಬ್ಬಂದಿ ಇದ್ದರು.