Saturday, July 27, 2024
Homeರಾಜಕೀಯವಿಧಾನಪರಿಷತ್‌ ಚುನಾವಣೆ : ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಿಎಂ ಸಿದ್ದು ಮೇಲುಗೈ

ವಿಧಾನಪರಿಷತ್‌ ಚುನಾವಣೆ : ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಿಎಂ ಸಿದ್ದು ಮೇಲುಗೈ

ಬೆಂಗಳೂರು, ಜೂ.3- ವಿಧಾನಪರಿಷತ್‌ನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹೈಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ರಾಜ್ಯದಲ್ಲಿನ ನಾಯಕತ್ವ ಮತ್ತಷ್ಟು ಗಟ್ಟಿಗೊಂಡಂತಾಗಿದೆ.

ನಿನ್ನೆ ಸಂಜೆ ಪ್ರಕಟಿಸಲಾದ ಕಾಂಗ್ರೆಸ್‌‍ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಶಿಫಾರಸ್ಸು ಮಾಡಿದ 3 ಮಂದಿಗೆ ಅವಕಾಶ ದೊರೆತಿದೆ. ಉಳಿದ ನಾಲ್ಕು ಸ್ಥಾನಗಳ ಪೈಕಿ ಹೈಕಮಾಂಡ್‌ ಮೂರೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಡಿ.ಕೆ.ಶಿವಕುಮಾರ್‌ರವರು ಸೂಚಿಸಿದ್ದ ಒಬ್ಬರಿಗೆ ಮಣೆ ಹಾಕಲಾಗಿದೆ.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಮುಖ್ಯಮಂತ್ರಿಯವರ ಸುಪುತ್ರ ಯತೀಂದ್ರ ಹಾಗೂ ಶಿವಮೊಗ್ಗದ ಬಲ್ಕೀಸ್‌‍ ಬಾನು ಅವರಿಗೆ ಅವಕಾಶ ದೊರೆತಿದೆ. ಡಿ.ಕೆ.ಶಿವಕುಮಾರ್‌ರವರು ಸೂಚಿಸಿದ್ದ ಐವಾನ್‌ ಡಿಸೋಜಾ ಅವರಿಗೆ ವಿಧಾನಪರಿಷತ್‌ ಸದಸ್ಯರಾಗುವ ಯೋಗ ಬಂದಿದೆ.

ಬಹುತೇಕ ಎನ್‌.ಎಸ್‌‍.ಬೋಸರಾಜು ಅವರನ್ನು ಕೈಬಿಡುವ ಸಾಧ್ಯತೆಯಿತ್ತಾದರೂ ಕೊನೆಕ್ಷಣದಲ್ಲಿ ಮರು ಅವಕಾಶ ನೀಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್‌ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಕೃಪಾಶೀರ್ವಾದ ಮಾಡಿದ್ದಾರೆ. ಬೋಸರಾಜ್‌ ಮತ್ತು ವಸಂತಕುಮಾರ್‌ ಇಬ್ಬರೂ ರಾಯಚೂರು ಜಿಲ್ಲೆಗೆ ಸೇರಿದವರಾಗಿದ್ದು, ಈ ಬಾರಿ ಪ್ರಾದೇಶಿಕ ಆದ್ಯತೆ ಮೂಲೆಗುಂಪಾಗಿದೆ.

ಕಲಬುರಗಿಯ ಜಿಲ್ಲಾ ಕಾಂಗ್ರೆಸ್‌‍ ಅಧ್ಯಕ್ಷ ಜಗದೇವ್‌ ಗುತ್ತೇದಾರ್‌ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡುವ ಮೂಲಕ ಹೈಕಮಾಂಡ್‌ ತಮ ಅಭಿಲಾಷೆಯನ್ನು ಈಡೇರಿಸಿಕೊಂಡಿದೆ.

ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕಾದ ವಿಚಾರ ಬಂದಾಗ ಯುವಕಾಂಗ್ರೆಸ್‌‍ನ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರಿಗೆ ಮಣೆ ಹಾಕಲಾಗಿದೆ.ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಂದ ತೆರವಾಗಿರುವ ಒಂದು ಸ್ಥಾನಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಅದಕ್ಕೆ ಬಸನಗೌಡ ಬಾದರ್ಲಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ವಿಧಾನಪರಿಷತ್‌ಗೆ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಪೈಕಿ ಗೋವಿಂದರಾಜು, ಎನ್‌.ಎಸ್‌‍.ಬೋಸರಾಜ್‌ ಮರಳಿ ಅವಕಾಶ ಪಡೆದಿದ್ದಾರೆ. ಬೋಸ್‌‍ರಾಜ್‌ 2ನೇ ಬಾರಿ ವಿಧಾನಪರಿಷತ್‌ ಸದಸ್ಯರಾಗುತ್ತಿದ್ದರೆ, ಗೋವಿಂದ ರಾಜು 3ನೇ ಬಾರಿಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಐವಾನ್‌ ಡಿಸೋಜಾ ಅವರಿಗೂ 2ನೇ ಬಾರಿ ಅದೃಷ್ಟ ಖುಲಾಯಿಸಿದೆ. ಯತೀಂದ್ರ ಈಗಾಗಲೇ ಶಾಸಕರಾಗಿ ಒಂದು ಅವಧಿಗೆ ಕೆಲಸ ಮಾಡಿದ್ದರು. ತಂದೆಗೆ ವರುಣ ಕ್ಷೇತ್ರವನ್ನು ಬಿಟ್ಟುಕೊಟ್ಟ ಪರಿಣಾಮ ಮೇಲನೆ ಅವಕಾಶ ದೊರೆತಿದೆ.

ವಸಂತಕುಮಾರ್‌ ರಾಯಚೂರು ಜಿಲ್ಲಾ ಕಾಂಗ್ರೆಸ್‌‍ ಅಧ್ಯಕ್ಷರಾಗಿದ್ದರು. ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಈಗ ವಿಧಾನಪರಿಷತ್‌ಗೂ ಅಭ್ಯರ್ಥಿ ಮಾಡಿರುವುದು ಗಮನ ಸೆಳೆದಿದೆ. ಯತೀಂದ್ರ ಹಾಗೂ ಬವನಗೌಡ ಬಾದರ್ಲಿ ಅವರನ್ನು ಹೊರತುಪಡಿಸಿ ಈ ಬಾರಿ ಕುಟುಂಬ ರಾಜಕಾರಣಕ್ಕೆ ಹೆಚ್ಚು ಮನ್ನಣೆ ಸಿಕ್ಕಿಲ್ಲ.

ಆದರೆ ಅವಕಾಶ ಪಡೆದವರಿಗೆ ಮರು ಆಯ್ಕೆ ಮಾಡುವುದಿಲ್ಲ ಎಂಬ ಹೈಕಮಾಂಡ್‌ನ ನಿಯಮಾವಳಿಗಳು ಕೆಲವರ ಪ್ರಕರಣದಲ್ಲಿ ಸಡಿಲಿಕೆ ಆಗಿರುವುದು ಅಚ್ಚರಿ ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್‌ ನಾಯಕರು ತಮಗೆ ಬೇಕಾದವರಿಗೆ ಸದಸ್ಯರನ್ನಾಗಿ ಮಾಡಿಕೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಿಂಬಾಲಕರಿಗೆ ನಿರಾಸೆಯಾದಂತಾಗಿದೆ.

ಈ ಬಾರಿ ವಿಧಾನಪರಿಷತ್‌ನಲ್ಲಿ ಅವಕಾಶ ಗಿಟ್ಟಿಸಲು ಸುಮಾರು 80ಕ್ಕೂ ಹೆಚ್ಚು ಮಂದಿ ಲಾಬಿ ನಡೆಸಿದ್ದರು. ಆದರೆ ಹೈಕಮಾಂಡ್‌ ತನ್ನದೇ ಆದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

RELATED ARTICLES

Latest News