Sunday, June 30, 2024
Homeರಾಜಕೀಯಪರಿಷತ್ ಚುನಾವಣೆ : ಕಾಂಗ್ರೆಸ್‌ಗೆ 4 ಕ್ಷೇತ್ರಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ

ಪರಿಷತ್ ಚುನಾವಣೆ : ಕಾಂಗ್ರೆಸ್‌ಗೆ 4 ಕ್ಷೇತ್ರಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ

ಬೆಂಗಳೂರು, ಮೇ 24- ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ಹಾಗೂ ಪದವೀಧರರ ದ್ವೈವಾರ್ಷಿಕ 6 ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಕನಿಷ್ಟ 4 ನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು, ಪಕ್ಷೇತರರ ಬೆಂಬಲದೊಂದಿಗೆ 137 ರವರೆಗೂ ಸಂಖ್ಯಾಬಲವನ್ನು ಹೊಂದಿರುವ ಕಾಂಗ್ರೆಸ್‌‍ ಪಕ್ಷ ಭರ್ಜರಿ ಬಹುಮತ ಸಾಧಿಸಿದೆ.

ಪಕ್ಷಗಳ ಬಲಾಬಲ :
ಆದರೆ ಮೇಲನೆ ವಿಧಾನಪರಿಷತ್‌ನಲ್ಲಿ ಬಿಜೆಪಿ ಮುಂದಿದ್ದು, ಜೆಡಿಎಸ್‌‍, ಬಿಜೆಪಿ ಮೈತ್ರಿಯಿಂದಾಗಿ ಕಾಂಗ್ರೆಸ್‌‍ ಪಕ್ಷ ಅಲ್ಪ ಮತಕ್ಕೆ ಕುಸಿದಿದೆ. 2024ರ ಏಪ್ರಿಲ್‌ 24ರವರೆಗಿನ ಸಂಖ್ಯಾಬಲದ ಪ್ರಕಾರ, ಬಿಜೆಪಿ 32, ಜೆಡಿಎಸ್‌‍ 7, ಸಭಾಪತಿ 1 ಸ್ಥಾನ ಸೇರಿ 40 ಬಲಾಬಲ ಹೊಂದಿದೆ.

ಪಕ್ಷೇತರರಾಗಿ ಆಯ್ಕೆಯಾಗಿರುವ ಲಖನ್‌ ಲಕ್ಷ್ಮಣರಾವ್‌ ಜಾರಕಿಹೊಳಿ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬುದು ಆಯಾ ಸಂದರ್ಭದ ಪರಿಸ್ಥಿತಿಯನ್ನು ಆಧರಿಸಿದೆ. ಕಾಂಗ್ರೆಸ್‌‍ 29 ಸದಸ್ಯರನ್ನು ಹೊಂದಿದ್ದು, ಈ ಮೊದಲು ಎಪಿಎಂಸಿ ಕಾಯ್ದೆಯನ್ನು ಅಂಗೀಕಾರ ಪಡೆದುಕೊಳ್ಳಲು ಸಾಧ್ಯವಾಗದೇ ವೈಫಲ್ಯ ಅನುಭವಿಸಿತ್ತು.

ಸದಸ್ಯರ ರಾಜೀನಾಮೆ :
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌‍ ಸೇರಿದ್ದ ಜಗದೀಶ್‌ ಶೆಟ್ಟರ್‌ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಗಿತ್ತು. ಅವರಿಗೆ 2028 ರ ಜೂನ್‌ 14 ರವರೆಗೂ ಅಧಿಕಾರವಧಿಯಿತ್ತು. ಆದರೆ ಅವರು ಕಾಂಗ್ರೆಸ್‌‍ ಹಾಗೂ ವಿಧಾನಪರಿಷತ್‌ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಮರಳಿದ್ದಾರೆ.

ಬಿಜೆಪಿಯ ಸದಸ್ಯರಾಗಿದ್ದ ತೇಜಸ್ವಿನಿ ರಮೇಶ್‌, ಕೆ.ಪಿ.ನಂಜುಂಡಿ ಅವರ ಅಧಿಕಾರವಧಿ ಈ ವರ್ಷದ ಜೂನ್‌ 17 ಕ್ಕೆ ಮುಕ್ತಾಯಗೊಳ್ಳುತ್ತಿದ್ದರೆ, ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್‌ ವಿಧಾನಸಭೆಗೆ ಸ್ಪರ್ಧಿಸುವ ಸಲುವಾಗಿ ರಾಜೀನಾಮೆ ನೀಡಿದ್ದರು. ಅದರ ಅಧಿಕಾರವಧಿ ಜೂ. 21 ರವರೆಗೆ ಇತ್ತು. ಜೆಡಿಎಸ್‌‍ ಸದಸ್ಯರಾಗಿದ್ದ ಮರಿತಿಬ್ಬೇಗೌಡ ಅವರು ಜೂನ್‌ 21 ಕ್ಕೆ ನಿವೃತ್ತರಾಗಬೇಕಿತ್ತು. ಆದರೆ ಪಕ್ಷ ಹಾಗೂ ವಿಧಾನಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌‍ ಸೇರಿ ಹೆಚ್ಚಿನ ಪದವೀಧರ ಕ್ಷೇತ್ರದಿಂದ ಮರು ಆಯ್ಕೆಯಾಗಲು ಸ್ಪರ್ಧಿಸಿದ್ದಾರೆ. ಈ ಐವರು ರಾಜೀನಾಮೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

ತೆರವಾಗುವ ಸ್ಥಾನಗಳು :
32 ಸದಸ್ಯರನ್ನು ಹೊಂದಿರುವ ಬಿಜೆಪಿಯಲ್ಲಿ ವಿಧಾನಸಭೆಯಿಂದ ಆಯ್ಕೆಯಾಗಿರುವ ಹಾಗೂ ಪದವೀಧರ ಶಿಕ್ಷಕರ ಕ್ಷೇತ್ರಗಳ ಸದಸ್ಯರಿಂದ 8 ಸ್ಥಾನಗಳು ತೆರವಾಗುತ್ತಿವೆ. ಕಾಂಗ್ರೆಸ್‌‍ನಲ್ಲಿ 7, ಜೆಡಿಎಸ್‌‍ನಲ್ಲಿ 2 ಸ್ಥಾನಗಳು ತೆರವಾಗುತ್ತಿವೆ.

ವಿಧಾನಸಭೆಯಿಂದ ಆಯ್ಕೆಗೆ ಚುನಾವಣೆ :
11 ಸದಸ್ಯರ ಅಧಿಕಾರವಧಿ ಜೂನ್‌ 16 ಕ್ಕೆ ಮುಕ್ತಾಯಗೊಳ್ಳಲಿದೆ. ಅದರಲ್ಲಿ ಬಿಜೆಪಿಯ 6, ಕಾಂಗ್ರೆಸ್‌‍ನ 4, ಜೆಡಿಎಸ್‌‍ನ ಒಬ್ಬರು ಸದಸ್ಯರಿದ್ದರು. ಈ ಸ್ಥಾನಗಳಿಗೆ ಜೂನ್‌ 13 ರಂದು ಚುನಾವಣೆ ನಡೆಯುತ್ತಿದ್ದು, ಅಲ್ಲಿ ಕಾಂಗ್ರೆಸ್‌‍ 7, ಬಿಜೆಪಿ 3, ಜೆಡಿಎಸ್‌‍ 1 ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶ ಹೊಂದಿದೆ.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾವಣೆ ನಡೆದ ಬಳಿಕ ಬಿಜೆಪಿಯ ಸಂಖ್ಯಾಬಲ 27, ಕಾಂಗ್ರೆಸ್‌‍ 31, ಜೆಡಿಎಸ್‌‍ 6 ಸದಸ್ಯರನ್ನು ಹೊಂದಲಿದೆ. ಸಭಾಪತಿಯವರನ್ನೂ ಒಳಗೊಂಡ ಬಳಿಕ ಜೆಡಿಎಸ್‌‍, ಬಿಜೆಪಿ ಮೈತ್ರಿಯ ಸಂಖ್ಯಾಬಲ 34 ಆಗಲಿದೆ.ಕಾಂಗ್ರೆಸ್‌‍ ಎರಡೂ ಪಕ್ಷಗಳನ್ನು ಮೀರಿಸಬೇಕಾದರೆ ಶಿಕ್ಷಕರ ಪದವೀಧರರ ದ್ವೈವಾರ್ಷಿಕ ಚುನಾವಣೆಯಲ್ಲಿ 4 ಕ್ಷೇತ್ರಗಳನ್ನು ಗೆಲ್ಲಲೇಬೇಕಿದೆ. ಈ ನಡುವೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಬಿಜೆಪಿಯ ಕೋಟಾ ಶ್ರೀನಿವಾಸ್‌‍ ಪೂಜಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದಾರೆ.

ಸಂಸತ್‌ಗೆ ಒಂದು ವೇಳೆ ಅವರು ಆಯ್ಕೆಯಾದರೆ ಮೇಲನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು. ಆಗ ಬಿಜೆಪಿಗೆ ಮತ್ತೊಂದು ಸ್ಥಾನ ಕೊರತೆಯಾಗುವ ಸಾಧ್ಯತೆಗಳಿವೆ. ಆಡಳಿತಾರೂಢ ಕಾಂಗ್ರೆಸ್‌‍ ವಿಧಾನಮಂಡಲದಲ್ಲಿ ಯಾವುದೇ ವಿಧೇಯಕ ಹಾಗೂ ನಿಯಮಗಳಿಗೆ ಸರಾಗವಾಗಿ ಅಂಗೀಕಾರ ಪಡೆದುಕೊಳ್ಳಬೇಕಾದರೆ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.

ಇದೇ ವರ್ಷ ಅಕ್ಟೋಬರ್‌ 29 ಕ್ಕೆ ನಾಮನಿರ್ದೇಶಿತ ಕಾಂಗ್ರೆಸ್‌‍ ಸದಸ್ಯರಾದ ಯು.ಬಿ.ವೆಂಕಟೇಶ್‌, ಪ್ರಕಾಶ್‌ ಕೆ. ರಾಥೋಡ್‌ ನಿವೃತ್ತರಾಗುತ್ತಿದ್ದು, ಆ ಎರಡೂ ಸ್ಥಾನಗಳಿಗೂ ನಾಮನಿರ್ದೇಶನ ಮಾಡಿಕೊಳ್ಳಲು ಸರ್ಕಾರಕ್ಕೆ ಅವಕಾಶ ಇದೆ.
ಈ ಲೆಕ್ಕಾಚಾರದ ಆಧಾರದ ಮೇಲೆ ಕನಿಷ್ಟ 2 ಸ್ಥಾನಗಳನ್ನು ಗೆದ್ದರೂ ಕಾಂಗ್ರೆಸ್‌‍ ಮೇಲನೆಯಲ್ಲಿ ಸಂಖ್ಯಾಬಲ ಸಾಧಿಸಿಕೊಳ್ಳುವ ಅವಕಾಶಗಳಿವೆ.

ಸಾಮಾನ್ಯವಾಗಿ ವಿಧಾನಪರಿಷತ್‌ನ ಚುನಾವಣೆಯ ಫಲಿತಾಂಶಗಳು ಆಡಳಿತಾರೂಢ ಪಕ್ಷಕ್ಕೆ ಅನುಕೂಲವಾಗಿರುತ್ತವೆ ಎಂಬ ಪ್ರತೀತಿ ಇದೆ. ಪ್ರಸ್ತುತ ಬಿಜೆಪಿ ಮತ್ತು ಜೆಡಿಎಸ್‌‍ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌‍ಗೆ ಸವಾಲಿನ ಪರಿಸ್ಥಿತಿ ಎದುರಾಗಿದೆ.

RELATED ARTICLES

Latest News