Friday, May 3, 2024
Homeರಾಜ್ಯ"ಒಕ್ಕಲಿಗರೇ ಉದ್ಯೋಗ ನೀಡುವ ಉದ್ಯಮಿಗಳಾಗಿ" : ನಿರ್ಮಲಾನಂದನಾಥ ಮಹಾಸ್ವಾಮೀಜಿ

“ಒಕ್ಕಲಿಗರೇ ಉದ್ಯೋಗ ನೀಡುವ ಉದ್ಯಮಿಗಳಾಗಿ” : ನಿರ್ಮಲಾನಂದನಾಥ ಮಹಾಸ್ವಾಮೀಜಿ

ಬೆಂಗಳೂರು,ಜ.19- ಒಕ್ಕಲಿಗರು ಕೃಷಿಗೆ ಸೀಮಿತವಾಗದೆ ಬದಲಾಗುತ್ತಿರುವ ಸ್ಥಾನಮಾನಕ್ಕೆ ತಕ್ಕಂತೆ ಬದುಕನ್ನು ಕೂಡ ಬದಲಾಯಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು. ಅರಮನೆ ಮೈದಾನದಲ್ಲಿಂದು ಬೆಂಗಳೂರಿನ ಫಸ್ಟ್ ಸರ್ಕಲ್ ಸೊಸೈಟಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಉದ್ಯಮಿ ಒಕ್ಕಲಿಗ ಎಕ್ಸ್‍ಪೋ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನೀಧ್ಯವಹಿಸಿ ಅವರು ಮಾತನಾಡಿದರು.

ಕೃತಕ ಬುದ್ದಿಮತ್ತೆ, ರೋಬೊಟಿಕ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ನಾವು ಎಚ್ಚೆತ್ತುಕೊಳ್ಳದಿದ್ದರೆ ಯಂತ್ರ ಮಾನವ ಜೊತೆ ಯುದ್ಧ ಮಾಡುವ ಇಲ್ಲವೇ ಸ್ಪರ್ಧೆ ಮಾಡುವ ಕಾಲ ದೂರವಿಲ್ಲ. ಬದಲಾವಣೆಗೆ ತಕ್ಕಂತೆ ನಾವು ಬದಲಾಗಿ ಸ್ಪರ್ಧೆ ಎದುರಿಸಲು ಸನ್ನದ್ದರಾಗಬೇಕು. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಮುಂತಾದ ಕ್ಷೇತ್ರದಲ್ಲಿ ನಾಲ್ಕಾರು ಜನರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಬೇಕು. ಇಲ್ಲದಿದ್ದರೆ ಡೈನೋಸರ್ ರೀತಿ ಅವನತಿ ಹೊಂದಬೇಕಾಗುತ್ತದೆ ಎಂದರು.

ಒಕ್ಕಲಿಗ ಉದ್ಯಮಿಯಾದರೆ ಹಲವು ಮಂದಿಗೆ ಉದ್ಯೋಗ ನೀಡಬಹುದು ಎಂದು ಹೇಳಿದರು.
ಗಂಗರ ಅರಸರ ಕಾಲದಿಂದಲೂ ಒಕ್ಕಲಿಗರು ಒಕ್ಕಲುತನದ ಜೊತೆಗೆ ಸಾಮ್ರಾಜ್ಯವನ್ನು ಕಟ್ಟಿ ಆಳಿದ್ದಾರೆ. ಗಂಗ ಅರಸರ ಕಾಲದಲ್ಲಿ ಉಪಪಂಗಡಗಳು ಇರಲಿಲ್ಲ. ಉದ್ಯಮಿ ಒಕ್ಕಲಿಗ ಸಮಾವೇಶದಲ್ಲಿ ಎಲ್ಲರೂ ಒಂದಾಗಿರುವುದು ಸಂತೋಷ. ಬೇಸಾಯದ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ವಿಸ್ತರಿಸಿಕೊಡಬೇಕು. ಆ ಮೂಲಕ ನಾಡಿಗೆ ಅನ್ನ ನೀಡುವ ಒಕ್ಕಲಿಗ ಉದ್ಯೋಗ ನೀಡುವ ಉದ್ಯಮಿಯಾಗಬೇಕು ಎಂದು ಸಲಹೆ ಮಾಡಿದರು.

ರಾಜ್ಯಕ್ಕೆ ಪ್ರಧಾನಿ ಆಗಮನದ ಬೆನ್ನಲ್ಲೇ ಪುಟಿದೆದ್ದ ರಾಜ್ಯ ಬಿಜೆಪಿ

ಬೇರೊಬ್ಬರ ಮರ್ಜಿಯಲ್ಲಿದ್ದರೆ ಜಾತಿ ಅಥವಾ ಗೌಡ ಎಂಬ ಹೆಸರನ್ನು ಹೇಳಿಕೊಳ್ಳಲು ಹಿಂಜರಿಕೆಯಾಗುತ್ತದೆ. ನಾವು ನಾಯಕನ ಸ್ಥಾನದಲ್ಲಿ ಇದ್ದಾಗ ನಾವೇ ಇನ್ನೊಬ್ಬರಿಗೆ ಉದ್ಯೋಗ ನೀಡುವಂತಾದರೆ ಗೌಡ ಎಂಬ ಹೆಗ್ಗಳಿಕೆ ಉಳಿಯುತ್ತದೆ ಎಂದರು. ಫಸ್ಟ್ ಸರ್ಕಲ್ ಸೊಸೈಟಿಯ ಮುಖ್ಯಸ್ಥ ಜಯರಾಂ ರಾಯಪುರೆ ಅವರು ಉದ್ಯಮಿಗಳನ್ನು ಬೆಸೆಯುವ ಕಾರ್ಯ ಮಾಡುತ್ತಿದ್ದು, ಶ್ರೀಮಠದಿಂದ ಎಲ್ಲ ಸಹಕಾರ ನೀಡುವುದಾಗಿ ಹೇಳಿದರು.

ನಿಷ್ಠೂರವಾಗಿ ಹೇಳಬಹುದು: ಇದಕ್ಕೂ ಮುನ್ನ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ದೀಪದಂತೆ ಸಮುದಾಯವನ್ನು ಉಜ್ವಲವಾಗಿ ಬೆಳೆಸುತ್ತಾರೆ. ಇಡೀ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡಿದ್ದಾರೆ. ಸಮುದಾಯದ ಮುಖಂಡರು, ನಮ್ಮಂಥ ನಾಯಕರು ತಪ್ಪು ಮಾಡಿದಾಗ ನಿಷ್ಠೂರವಾಗಿ ಹೇಳಬಹುದು ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಇನ್ನು ನಾಲ್ಕು ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಪರಸ್ಪರ ಒಟ್ಟಿಗೆ ಸಂಘದ ಏಳಿಗೆಗೆ ಶ್ರಮಿಸಬೇಕು. ಕಿತ್ತಾಡಿದರೆ ಆಡಳಿತಾಧಿಕಾರಿಯನ್ನು ಸಂಘಕ್ಕೆ ನೇಮಿಸಬೇಕಾಗುತ್ತದೆ ಎಂದು ಸಂಘಕ್ಕೆ ಎಚ್ಚರಿಸಿದರು.

ಉದ್ಯಮಿಗಳ ಜೊತೆ ಎರಡು ಗಂಟೆಗಳ ಕಾಲ ಬೆರೆತು ಸಮಾಲೋಚನೆ ನಡೆಸುವುದಾಗಿ ಹೇಳಿದವರು, ನಾಯಕರಾದವರು ನಾಯಕರನ್ನು ಸೃಷ್ಟಿ ಮಾಡಬೇಕು. ನಮ್ಮ ಸಮಾಜದ ಆಧಾರ ಸ್ತಂಭವಾಗಿ ನಾನು ಮುಂದಿರುವೆ. ಒಕ್ಕಲಿಗರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ವ್ಯವಹಾರ ಇತಿಮಿತಿಯಲ್ಲಿರಬೇಕು ಎಂದರು.

ನಾಸಾ ಸಂಪರ್ಕಕ್ಕೆ ಸಿಕ್ಕ ಚಂದ್ರಯಾನ-3ರ ಪ್ರಗ್ಯಾನ್ ರೋವರ್

ಕೃಷಿ ಮೂಲದ ಬೇರನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಾವು ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು. ಕನಕಪುರದ ಕಲ್ಲು ಭೂಮಿಯಿಂದ ಬರುವೆ. ಕಲ್ಲಿಗೆ ಹೆಚ್ಚು ಏಟು ಬಿದ್ದಷ್ಟು ಆಕೃತಿಯಾಗುತ್ತದೆ. ಸಾಕಷ್ಟು ಏಟು ತಿಂದು ನಾನು ನಿಮ್ಮ ಮುಂದೆ ನಿಂತಿರುವೆ. ಯುವ ಉದ್ಯಮಿಗಳನ್ನು ಬೆಳೆಸಿ ಎಂದು ಉದ್ಯಮಿಗಳಿಗೆ ಕರೆ ನೀಡಿದರು.

ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ಸಾಮಥ್ರ್ಯ ಇರುವ ಯುವಕರನ್ನು ಉದ್ಯಮಿಗಳನ್ನಾಗಿ ಬೆಳೆಸಬೇಕು. ಉದ್ಯಮ ಕ್ಷೇತ್ರದಲ್ಲಿ ಒಕ್ಕಲಿಗರು ಮೊದಲ ಸ್ಥಾನಕ್ಕೆ ಬರಬೇಕು. ದೊಡ್ಡ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಬೇಕು. ನಾನು ಉದ್ಯಮಕ್ಕೆ ಬರುತ್ತೇನೆ ಎಂದು ಹೇಳಿದರು. ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಒಕ್ಕಲಿಗ ಉದ್ಯಮಿಗಳ ನಡುವೆ ಸ್ಪರ್ಧೆ ಬೇಡ. ಒಬ್ಬರಿಗೊಬ್ಬರು ಅನ್ಯೂನ್ಯತೆಯಿಂದ ಇರಬೇಕು. ಪರಸ್ಪರ ಸಹಾಯ ಮನೋಭಾವ ರೂಢಿಸಿಕೊಳ್ಳಬೇಕು. ಕೃಷಿ ಜೊತೆಗೆ ಆದಾಯ ಬರುವ ಇತರೆ ಮೂಲಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಮಾಜಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಬೆಂಗಳೂರಿನಲ್ಲಷ್ಟೇ ಅಲ್ಲ ಮೈಸೂರಿನಲ್ಲೂ ಜಮೀನಿಗೆ ದುಬಾರಿ ಬೆಲೆ ಬಂದಿದೆ. ಲಕ್ಷ ರೂ.ಗೆ ಮಾರಾಟವಾಗುತ್ತಿದ್ದ ಜಮೀನು ಕೋಟಿ ರೂ.ಗೆ ಏರಿಕೆಯಾಗಿದೆ. ಜಮೀನನ್ನು ಮಾರಬೇಡಿ. ಒಕ್ಕಲಿಗರು ಸಂಘಟಿತರಾದ ರಾಜಕಾರಣಿಗಳು ಓಡೋಡಿ ಬರುತ್ತಾರೆ. ಯುವ ಸಮುದಾಯಕ್ಕೆ ಕೇಂದ್ರ ಸರ್ಕಾರದಿಂದ ದೊರೆಯುವ ಯೋಜನೆಗಳ ಮಾಹಿತಿಯನ್ನು ನೀಡಬೇಕು ಎಂದು ಸಲಹೆ ಮಾಡಿದರು. ಫಸ್ಟ್ ಸರ್ಕಲ್ ಸೊಸೈಟಿಯ ಮುಖ್ಯಸ್ಥ ಜಯರಾಮ್ ರಾಯಪುರೆ ಮಾತನಾಡಿ, ಗುಣಮಟ್ಟಕ್ಕೆ ಒತ್ತು ಕೊಟ್ಟರೆ ಬೆಂಗಳೂರಿನಲ್ಲಿ ಉದ್ಯಮ ಯಶಸ್ಸು ಕಾಣಲಿದೆ. ಉದ್ಯಮದಲ್ಲಿ ಒಕ್ಕಲಿಗರು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವ ವೆಂಟೇಶ್, ನಿರ್ದೇಶಕ ನಾಗಾಭರಣ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ,ರಾಜ್ಯ ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಬಿ.ಕೆಂಚಪ್ಪ ಗೌಡ, ಅಧ್ಯಕ್ಷ ಬಿ.ಹನುಮಂತಯ್ಯ, ಉಪಾಧ್ಯಕ್ಷ ಎಲ್.ಶ್ರೀನಿವಾಸ್, ಖಜಾಂಚಿ ಮಾರೇಗೌಡ, ಹೊಸೂರಿನ ಶಾಸಕ ವೈ.ಪ್ರಕಾಶ್, ನಿರ್ಮಾಪಕ ಪುಟ್ಟರಾಜು, ಉದ್ಯಮಿಗಳಾದ ಸುದರ್ಶನ್ ಕಾರ್ಲೆ, ಕುಸುಮಾ ಹನುಮಂತಯ್ಯ, ಭಾರತಿ ಶಂಕರ್, ಎಂ.ಎ.ಆನಂದ್, ಪ್ರಸನ್ನ, ಕನ್ನಡವೇ ಸತ್ಯ ರಂಗಣ್ಣಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

RELATED ARTICLES

Latest News