ಬೆಂಗಳೂರು, ಏ.27- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ನಿನ್ನೆ ಶೇ.69.23ರಷ್ಟು ಮತದಾನವಾಗಿದ್ದು, ಇದು ಕಳೆದ ಎರಡೂ ಲೋಕಸಭಾ ಚುನಾವಣೆಗಳಿಗಿಂತ ಹೆಚ್ಚಾಗಿದೆ. ಕಳೆದ 2014ರಲ್ಲಿ ಶೇ.67.73ರಷ್ಟು ಹಾಗೂ 2019ರಲ್ಲಿ 68.96ರಷ್ಟು ಮತದಾನವಾಗಿತ್ತು.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ಪ್ರಕಾರ, ಲೋಕಸಭೆಗಿಂತ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಾಗಿದೆ. ಅಂದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ. 74.37ರಷ್ಟು ಹಾಗೂ 2023ರಲ್ಲಿ 74.69ರಷ್ಟು ಮತದಾನವಾಗಿತ್ತು. ಆದರೆ, ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಮತದಾನದ ಪ್ರಮಾಣ ಹೆಚ್ಚಾಗುವದಲು ಕಡಿಮೆಯಾಗಿದೆ.
ನಿರೀಕ್ಷೆಯಂತೆ ಮಂಡ್ಯ ಕ್ಷೇತ್ರದಲ್ಲಿ ಅತ್ಯಧಿಕ ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಮಂಡ್ಯದಲ್ಲಿ ಶೇ.81.48ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ 52.81ರಷ್ಟು ಮತದಾನವಾಗಿದೆ. ನಗರ ಪ್ರದೇಶಕ್ಕಿಂತ ಗ್ರಾಮಾಂತರ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ. ನಿನ್ನೆ ನಡೆದ ಮತದಾನದ ವಿವರ ಈ ಕೆಳಕಂಡಂತಿದೆ.
ಉಡುಪಿ-ಚಿಕ್ಕಮಗಳೂರು-76.06, ಹಾಸನ-77.51, ದಕ್ಷಿಣ ಕನ್ನಡ-77.43, ಚಿತ್ರದುರ್ಗ-73.11, ತುಮಕೂರು-77.70, ಮಂಡ್ಯ-81.48, ಮೈಸೂರು-70.45, ಚಾಮರಾಜನಗರ-76.59, ಬೆಂಗಳೂರು ಗ್ರಾಮಾಂತರ- 67.29, ಬೆಂಗಳೂರು ಉತ್ತರ-54.42, ಬೆಂಗಳೂರು ಕೇಂದ್ರ-52.81, ಬೆಂಗಳೂರು ದಕ್ಷಿಣ- 53.15, ಚಿಕ್ಕಳ್ಳಾಪುರ-76.82 ಹಾಗೂ ಕೋಲಾರ ಕ್ಷೇತ್ರದಲ್ಲಿ 78.07ರಷ್ಟು ಮತದಾನವಾಗಿದೆ.