Saturday, November 23, 2024
Homeರಾಜ್ಯಪ್ರಜ್ವಲ್ ಕೈ ಹಿಡಿದು ಮತಯಾಚನೆ ಮಾಡಿದ್ದಕ್ಕೆ ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್

ಪ್ರಜ್ವಲ್ ಕೈ ಹಿಡಿದು ಮತಯಾಚನೆ ಮಾಡಿದ್ದಕ್ಕೆ ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್

ಕಲಬುರಗಿ,ಮೇ 2- ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ವಲ್ ರೇವಣ್ಣ ಅವರ ಕೈ ಹಿಡಿದು ಅವರ ಪರ ಮತಯಾಚನೆ ಮಾಡಿದ್ದಕ್ಕೆ ನಾವು ಪೆನ್ ಡ್ರೈವ್ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೆನ್ ಡ್ರೈವ್ ವಿಚಾರದಲ್ಲಿ ಪ್ರಧಾನಮಂತ್ರಿ ಗಳನ್ನು ಯಾಕೆ ಎಳೆದು ತರುತ್ತೀರಿ ಎಂಬ ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದರು.
ಪ್ರಧಾನಮಂತ್ರಿಗಳು ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದ್ದಾರಲ್ಲ. ಅವರದೇ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಕಾರಣ ನಾವು ಪ್ರಧಾನಿಗಳನ್ನು ಪ್ರಶ್ನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪ್ರಜ್ವಲ್ ಬಂಧಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಲಿ ಎಂದು ಆರ್.ಅಶೋಕ್ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರು ಬೇರೆ ವಿಚಾರಗಳಲ್ಲಿ ವಾಗ್ದಾಳಿ ಮಾಡುತ್ತಿದ್ದವರು ಈ ಪ್ರಕರಣಗಳಲ್ಲಿ ಏಕೆ ಮಾತನಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಸುನೀಲ್ ಕುಮಾರ್ ಸೇರಿದಂತೆ ಪ್ರಮುಖ ನಾಯಕರನ್ನು ಆರ್.ಅಶೋಕ್‍ರವರು ಕರೆದುಕೊಂಡು ಹೋಗಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಮಹಿಳೆಯರ ಬಗ್ಗೆ ಗೌರವ ಇದೆ ಎನ್ನುವ ಕುಮಾರಸ್ವಾಮಿ ಹಾಗೂ ದೇವೇಗೌಡರು ಕೂಡ ಸಂತ್ರಸ್ತರ ಮನೆಗೆ ಹೋಗಿ ಧೈರ್ಯ ತುಂಬಬೇಕು. ಸಂತ್ರಸ್ತರನ್ನು ಏಕೆ ಭೇಟಿ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಪ್ರಜ್ವಲ್ ಅವರನ್ನು ಏಕೆ ಬಂಧಿಸಿಲ್ಲ ಎಂಬ ಬಗ್ಗೆ ಗೃಹ ಸಚಿವರು ಉತ್ತರ ನೀಡುತ್ತಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದಿಂದ ಪ್ರಜ್ವಲ್ ಗೆದ್ದಿದ್ದಾರೆ ಎಂದು ಆರ್.ಅಶೋಕ್ ಹೇಳಿದ್ದಾರೆ. ಅದು ನಿಜ. ಅವರು ನಮ್ಮ ಬೆಂಬಲದಿಂದ ಗೆದ್ದಿರುವ ಕಾರಣದಿಂದಾಗಿಯೇ ಪ್ರಶ್ನೆ ಮಾಡುತ್ತಿದ್ದೇವೆ. ಈಗ ನಿಮ್ಮ ಬೆಂಬಲದೊಂದಿಗೆ ಅಭ್ಯರ್ಥಿ ಯಾಗಿದ್ದಾರಲ್ಲ ನೀವು ಏಕೆ ಮೌನ ವಾಗಿದ್ದೀರಿ? ಎಂದು ಪ್ರಶ್ನಿಸಿದರು.

ಹಾಸನದ ಪೆನ್‍ಡ್ರೈವ್‍ಗಳ ವಿಚಾರದಲ್ಲಿ ಕಾರ್ತಿಕ್ ಎಂಬಾತನನ್ನು ಮಲೇಷಿಯಾದಲ್ಲಿ ಅಡಗಿಸಿಡಲಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ನಮ್ಮ ಬ್ರದರ್ ಆ ರೀತಿ ಹೇಳಿದ್ದಾರಲ್ಲಾ ಹಾಗಿದ್ದರೆ ಎಲ್ಲಾ ವಿಚಾರಗಳೂ ಗೊತ್ತಿರಬೇಕು. ಕೇಂದ್ರ ಸರ್ಕಾರಕ್ಕೆ ಹೇಳಿ ಕಾರ್ತಿಕ್‍ನನ್ನು ವಿದೇಶಕ್ಕೆ ಕಳುಹಿಸಿದವರ್ಯಾರು ಎಂಬ ಮಾಹಿತಿ ಪಡೆದುಕೊಳ್ಳಲಿ ಮತ್ತು ಆತನನ್ನು ಕರೆತರಲಿ ಎಂದು ಸವಾಲು ಹಾಕಿದರು.

ಕಾರ್ತಿಕ್‍ರನ್ನು ವಿದೇಶಕ್ಕೆ ಕಳುಹಿಸಲು ನನಗೆ ತಲೆ ಕೆಟ್ಟಿದೆಯಾ? ನಾನು ನೇರವಾಗಿ ಹೋರಾಟ ಮಾಡುತ್ತೇನೆ. ಯಾರನ್ನೋ ತೋಟದಲ್ಲಿ ಬಚ್ಚಿಟ್ಟು ರಾಜಕಾರಣ ಮಾಡುವ ಅಗತ್ಯ ನನಗಿಲ್ಲ. ಅವರಿಗೆ ಆ ಅವಶ್ಯಕತೆ ಇದೆ. ಬಿಜೆಪಿ ನಾಯಕರಿಗೆ ಪೆನ್ ಡ್ರೈವ್ ನೀಡಿರುವುದಾಗಿ ಕಾರ್ತಿಕ್ ಹೇಳಿದ್ದಾನೆ. ಇನ್ನು ವಕೀಲ ದೇವರಾಜೇಗೌಡರು ನನಗೆ ಕುಮಾರಣ್ಣ ಹಾಗೂ ಗೌಡರ ಮೇಲೆ ಅಭಿಮಾನವಿದೆ. ಹೀಗಾಗಿ ಅವರನ್ನು ಭೇಟಿ ಮಾಡಿ ಎಲ್ಲಾ ವಿಷಯ ತಿಳಿಸಿದ್ದೆ ಎಂದು ಹೇಳಿದ್ದಾರೆ.

ಎರಡನೇ ಹಂತದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಐದು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಈ ಐದೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಈ ಭಾಗಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಕೊಟ್ಟಿರುವ ಕೊಡುಗೆ ಬಗ್ಗೆ ಜನರಿಗೆ ಅರಿವಿದೆ. ಅವರ ಸೋಲಿಗೆ ನಾವೆಲ್ಲೆ ಪಶ್ಚಾತಾಪ ಪಟ್ಟಿದ್ದೇವೆ. ಹೀಗಾಗಿ ಅವರ ಸೇವೆಗೆ ಈ ಭಾಗದ ಜನ ಉಪಕಾರ ಸ್ಮರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸುರಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಾತಾವರಣವಿದೆ. ಕಳೆದ ಚುನಾವಣೆ ಬಳಿಕ ಬಿಜೆಪಿ ಅಭ್ಯರ್ಥಿ ತಮ್ಮ ಕಾರ್ಯಕರ್ತರಿಗೆ 2 ವರ್ಷ ನಾನು ಇರುವುದಿಲ್ಲ, ಯಾರೂ ಮನೆಕಡೆ ಬರಬೇಡಿ ಎಂದು ಹೇಳಿದ್ದರು. ಇನ್ನು ಅವರ ಕಾರ್ಯಕರ್ತರೂ ಕೂಡ ನಮ್ಮ ಪಾಲಿಕೆ ಚುನಾವಣೆ ಸಮಯದಲ್ಲಿ ಅವರೇ ನಮ್ಮ ಜೊತೆ ಇರಲಿಲ್ಲ. ಈಗ ನಾವು ಯಾಕೆ ಅವರ ಪರ ಚುನಾವಣೆ ಮಾಡಬೇಕು ಎಂದು ಸುಮ್ಮನಿದ್ದಾರೆ ಎಂದು ಜನ ತಿರುಗೇಟು ನೀಡುತ್ತಿದ್ದಾರೆ ಎಂದರು.

RELATED ARTICLES

Latest News