ಅರಕಲಗೂಡು, ಸೆ.28- ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೆ 12 ಸಾವಿರ ಶಿಕ್ಷಕರ ನೇಮಕಾತಿ ಮಾಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ತಾಲ್ಲೂಕು ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಪಟ್ಟಣದ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಬಹು ದೊಡ್ಡ ಇಲಾಖೆಯಾಗಿದೆ. ರಾಜ್ಯದಲ್ಲಿ 58 ಸಾವಿರ ಶಾಲಾ ಕಾಲೇಜುಗಳು ಇದ್ದು ಒಂದು ಕೋಟಿಗೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಸರ್ಕಾರಿ ನೌಕರರಲ್ಲಿ ಶೇ 40 ರಷ್ಟು ನೌಕರರು ಈ ಇಲಾಖೆಯವರೆ ಇದ್ದು ವಾರ್ಷಿ ರೂ 50 ಸಾವಿರ ಕೋಟಿ ವೆಚ್ಚವಾಗುತ್ತಿದೆ. 7 ನೇ ವೇತನ ಆಯೋಗದ ಅನುಷ್ಠಾನದಿಂದ ಶಿಕ್ಷರ ವೇತನದಲ್ಲಿ ರೂ 6 ಸಾವಿರ ಕೋಟಿ ಹೆಚ್ಚಳವಾಗಿದೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ 6 ಸಾವಿರ ಶಿಕ್ಷಕರ ನೇಮಕಾತಿ ಬಾಕಿ ಇದ್ದು 5800 ಶಿಕ್ಷಕರನ್ನು ಒಂದುತಿಂಗಳಲ್ಲಿ ನೇಮಕಾತಿ ಮಾಡಲಾಗುವುದು. ರಾಜ್ಯದಲ್ಲಿ 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕಮಾಡಿ ಕೊಂಡಿದ್ದು ದೈಹಿಕ ಶಿಕ್ಷರು ಸೇರಿದಂತೆ ವಿವಿಧ ವಿಷಯಗಳನ್ನು ಬೋಧಿಸಲು ಹೆಚ್ಚುವರಿಯಾಗಿ 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು.
ಸರ್ಕಾರಿ ಶಾಲೆಯ ಮಕ್ಕಳಲ್ಲಿ ಅಪೌಷ್ಠಕತೆ ಹೊಗಲಾಡಿಸಲಿ ಈ ಗಾಗಲೆ ರಾಗಿ ಮಾಲ್ಟ ನೀಡಲಾಗುತ್ತಿದೆ. ವಾರದಲ್ಲಿ ಎರಡು ದಿನ ಕೋಳಿ ಮೊಟ್ಟೆ ನೀಡುವ ಯೋಜನೆ ಮಾಡಲಾಗಿತ್ತು.ಈ ಯೋಜನೆಗೆ ಅಜೀಂ ಪ್ರೇಂಜೀ ಪೌಂಡೇಷನ್ ರೂ1591ಕೋಟಿ ದೇಣಿಗೆ ನೀಡಿದ್ದು ಇದರಲ್ಲಿ ವಾರದ 6 ದಿನಗಳೂ ಮೊಟ್ಟೆ ನೀಡುವ ಯೋಜನೆ ರೂಪಿಸಿದ್ದು ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.
ಶಾಸಕ ಎ. ಮಂಜು ಮಾತನಾಡಿ, ತಾಲ್ಲೂಕಿನಲ್ಲಿ ತಾವು ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ತೆರೆದಿರುವ 12 ಮಕ್ಕಳ ಮನೆ ಪೂರ್ವ ಪ್ರಾಥಮಿಕ ಶಾಲೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ, ಇದಕ್ಕೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸಹಕಾರ ಮುಖ್ಯವಾಗಿದೆ. ಸಚಿವರು ತಾಲ್ಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿದರು.
ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಹುಣಸೂರು ಬಾಲಕಿಯರ ಸರ್ಕಾರಿಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎನ್. ಗಿರೀಶ್ ಮಾತನಾಡಿದರು. ಇದೇ ವೇಳೆ ನವೀಕೃತ ಗುರುಭವನವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.
ಪಪಂ ಅಧ್ಯಕ್ಷ ಎಸ್. ಎಸ್. ಪ್ರದೀಪ್ ಕುಮಾರ್, ತಹಶೀಲ್ದಾರ್ ಸೌಮ್ಯ, ಜಿಪಂ ಉಪಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕ ಮಹಾಲಿಂಗಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ. ಪಾಂಡು, ಡಯಟ್ ಪ್ರಾಂಶುಪಾಲ ಜಿ. ರಂಗನಾಥಸ್ವಾಮಿ, ತಾಪಂ ಇಒ ಪ್ರಕಾಶ್, ಬಿಇಒ ಕೆ.ಪಿ. ನಾರಾಯಣ್, ಬಿಆರ್ ಸಿ ಸಿ.ಎಸ್. ಬಾಲರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ. ಎ. ರಂಗಸ್ವಾಮಿ, ಪಪಂ ಮುಖ್ಯಾಧಿಕಾರಿ ಬಸವರಾಜ್ ಟಾಕಪ್ಪ ಶಿಗ್ಗಾಂವಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ, ಜಿಲ್ಲಾ ಪ್ರೌಢಶಾಲಾ ಸಂಘದ ಅಧ್ಯಕ್ಷ ಎಚ್.ಸಿ. ಬಸವರಾಜ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಪಿ.ಶಿವಶಂಕರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.