ಬೆಂಗಳೂರು,ಸೆ.2– ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲಾ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಾವಿನ ನಡುವೆಯೂ ಹಣ ಲೂಟಿ ಹೊಡೆದಿದ್ದಾರೆ. ಪಿಎಸ್‌ಐ, ಬಿಟ್ ಕಾಯಿನ್ ಹಗರಣ ಸೇರಿದಂತೆ ಎಲ್ಲವನ್ನೂ ತನಿಖೆಗೊಳಪಡಿಸಲಾಗಿದೆ. ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ಸಂದರ್ಭದಲ್ಲಿನ ಹಗರಣಗಳಿಗೆ ಆಗಿನ ಸಚಿವರೇ ಹೊಣೆಗಾರರು ಎಂದ ಎಂ.ಬಿ.ಪಾಟೀಲ್, ವೈದ್ಯಕೀಯ ಕಾಲೇಜುಗಳ ನಿರ್ಮಾಣದಲ್ಲಿ ಏಕಾಏಕಿ ಹಲವಾರು ಪಟ್ಟು ಯೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ.
ಸುಮಾರು 15-20 ಸಚಿವ ಸಂಪುಟ ಸಭೆಗಳಲ್ಲಿ ಈ ಬಗ್ಗೆ ನಿರಂತರ ಚರ್ಚೆಯಾಗಿದೆ. 300-400 ಕೋಟಿ ರೂ. ಏಕಾಏಕಿ ಹೆಚ್ಚಿಸುವ ಬಗ್ಗೆ ಸಚಿವ ಪರಮೇಶ್ವರ್ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ನಮ ಅನಿವಾರ್ಯತೆಗಳು ಹೇಗಿದ್ದವು ಎಂದರೆ, ಅವರ ಕಾಲದಲ್ಲಿ ಮಾಡಿದ್ದ ಭ್ರಷ್ಟಾಚಾರ ಕಣ್ಣೆದುರಿಗೇ ಇದ್ದರೂ ಬಾಕಿ ಉಳಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಪರಿಸ್ಥಿತಿ ಎದುರಾಗಿತ್ತು. ಇಲ್ಲವಾದರೆ ಕಾಮಗಾರಿ ಅರ್ಧಕ್ಕೇ ನಿಲ್ಲುತ್ತಿತ್ತು. ಯೋಜನೆ ವ್ಯರ್ಥವಾಗುತ್ತಿತ್ತು. ಜನರಿಗೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಾಕಿ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ ಎಂದರು.
ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ಸ್ವಂತ ವಿವೇಚನೆಯಿಂದ ಕೆಲಸ ಮಾಡಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಅಣತಿಯಂತೆ ವರ್ತಿಸುತ್ತಿದ್ದಾರೆ.
ರಾಜಭವನ ಚಲೋ ನಡೆಸಿ ನಾವು ರಾಜ್ಯಪಾಲರನ್ನು ಭೇಟಿ ಮಾಡಿದಾಗ ಶಶಿಕಲಾ ಜೊಲ್ಲೆ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಉಳಿದ ಮೂರು ಪ್ರಕರಣಗಳ ಅಭಿಯೋಜನೆಗೆ ಪೂರ್ವಾನುಮತಿ ಕೇಳಿದ್ದ ಕಡತಕ್ಕೆ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಕಡತಗಳಿನ್ನೂ ರಾಜ್ಯಪಾಲರ ಬಳಿಯೇ ಉಳಿದುಕೊಂಡಿವೆ ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ಜಯ ಸಿಗುವ ವಿಶ್ವಾಸವಿದೆ. ಮತ್ತಷ್ಟು ಶಕ್ತಿಶಾಲಿಯಾಗಿ ಸಿದ್ದರಾಮಯ್ಯ ಹೊರಹೊಮುತ್ತಾರೆ.
ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಮಂದಿ ಮುಖ್ಯಮಂತ್ರಿಯಾಗುವ ಕುರಿತು ಹೇಳಿಕೆ ನೀಡಿರುವುದು ಸಾಂದರ್ಭಿಕ ಅಷ್ಟೇ. ನಾನು ಕೂಡ ಈ ಮೊದಲು ಇಂತಹ ಹೇಳಿಕೆ ನೀಡಿದ್ದೇನೆ. ಆದರೆ ನಮಲ್ಲಿ ಯಾವುದೇ ಗೊಂದಲಗಳಿಲ್ಲ. ಪರಸ್ಪರ ಭೇಟಿಯಾಗುತ್ತಿರುತ್ತೇವೆ.
ಪಕ್ಷದ ವಿಚಾರ, ಇಲಾಖೆ ಮತ್ತು ಕ್ಷೇತ್ರಕ್ಕೆ ಸಂಬಂಧಪಟ್ಟ ಚರ್ಚೆಗಳಾಗುತ್ತವೆ. ರಾಜಕೀಯದ ಬಗ್ಗೆಯೂ ಮಾತನಾಡುತ್ತೇವೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಸಮರ್ಥಿಸಿಕೊಂಡರು.ಮುಖ್ಯಮಂತ್ರಿ ಬದಲಾವಣೆ ಎಂಬುದು ಹಗಲು ಕನಸು. ಅದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದು, ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬುದು ಆಧಾರರಹಿತ ಎಂದರು.
ಎತ್ತಿನಹೊಳೆ ಯೋಜನೆ ರೂಪಿಸಿದಾಗ 22 ರಿಂದ 24 ಟಿಎಂಸಿ ನಿರೀಕ್ಷಿಸಲಾಗಿತ್ತು. ಈಗ 16 ಟಿಎಂಸಿ ಬರಲಿದೆ. ಮತ್ತಷ್ಟು ಸಣ್ಣಪುಟ್ಟ ತೊಂದರೆಗಳನ್ನು ಸರಿಪಡಿಸಿದರೆ ಮೂರ್ನಾಲ್ಕು ಟಿಎಂಸಿ ಹೆಚ್ಚುವರಿಯಾಗಿ ದೊರೆಯಲಿದೆ.
ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ಕಡೆಯಿಂದ ಈ ಯೋಜನೆಗಳಿಗೆ ಟೀಕೆಗಳು ಕೇಳಿಬಂದಿದ್ದವು. ಆದರೆ ಈಗ ಯೋಜನೆ ಯಶಸ್ವಿಯಾಗಿದೆ. ನೀರು ಲಭ್ಯವಾಗುತ್ತಿದೆ. ಇದೇ 6 ರಂದು ಯೋಜನೆ ಉದ್ಘಾಟನೆಯಾಗಲಿದೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ನ್ಯಾಯಾಧಿಕರಣದ ತೀರ್ಪು ಅಧಿಸೂಚನೆ ಜಾರಿಯಾಗಬೇಕು. ಆಲಮಟ್ಟಿ ಅಣೆಕಟ್ಟೆಯನ್ನು 519.06 ಅಡಿಯಿಂದ 524.25 ಅಡಿ ಎತ್ತರಿಸಲು 1 ಲಕ್ಷ ಭೂಮಿ ಮುಳುಗಡೆಯಾಗಲಿದೆ. ಅಷ್ಟು ಜಮೀನಿಗೂ ಪರಿಹಾರ ನೀಡಬೇಕು. ಭಾರಿ ಪ್ರಮಾಣದ ಹಣ ಬೇಕಿದೆ. ಈವರೆಗೂ 30 ಸಾವಿರ ಎಕರೆ ಸ್ವಾಧೀನ ಪ್ರಕ್ರಿಯೆಗಳು ಚಾಲನೆಯಲ್ಲಿವೆ.
ನ್ಯಾಯಾಲಯದ ತೀರ್ಪು ಅಧಿಸೂಚನೆಯಾದ ಬಳಿಕ ಹಣಕಾಸು ಸೌಲಭ್ಯ ಒದಗಿಸಲು ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಎಲ್ಲಾ ಅರ್ಹತೆಗಳೂ ಇವೆ. ಆದರೆ ಅಂತರಾಜ್ಯ ನದಿ ವಿವಾದ ಇರುವುದರಿಂದಾಗಿ ಅದನ್ನು ಅಧಿಸೂಚನೆ ಹೊರಡಿಸಿ ಇತ್ಯರ್ಥಪಡಿಸಲು ಸಾಧ್ಯವಿದೆ ಎಂದರು.