Saturday, July 27, 2024
Homeರಾಜ್ಯಯಾರಾಗಲಿದ್ದಾರೆ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕರು..?

ಯಾರಾಗಲಿದ್ದಾರೆ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕರು..?

ಬೆಂಗಳೂರು, ಜೂ.6-ಪ್ರಸಕ್ತ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕರು ಯಾರಾಗಲಿದ್ದಾರೆ ಎಂಬ ಚರ್ಚೆ ಪ್ರಾರಂಭವಾಗಿದೆ. ಶಾಸಕಾಂಗ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಸಂಸದರಾಗಿರುವ ಹಿನ್ನೆಲೆಯಲ್ಲಿ ಆ ಸ್ಥಾನ ತೆರವಾಗಲಿದೆ.

ಜೆಡಿಎಸ್‌‍ನಲ್ಲಿ ಮಾಜಿ ಸಚಿವರಾದ ಹೆಚ್‌.ಡಿ.ರೇವಣ್ಣ, ಜಿ.ಟಿ.ದೇವೇಗೌಡ ಹಾಗೂ ಶ್ರೀನಿವಾಸಪುರ ಕ್ಷೇತ್ರದ ವೆಂಕಟಶಿವಾರೆಡ್ಡಿ ಅವರು ಹಿರಿಯ ಶಾಸಕರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸಂಸದರಾಗಿದ್ದ ಸಂದರ್ಭದಲ್ಲೂ ರೇವಣ್ಣ ಅವರು ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕರಾಗಿದ್ದರು.

ಜಿ.ಟಿ.ದೇವೇಗೌಡ ಅವರು ಪ್ರಸ್ತುತ ಜೆಡಿಎಸ್‌‍ ಕೋರ್‌ ಕಮಿಟಿ ಅಧ್ಯಕ್ಷರಾಗಿದ್ದಾರೆ. ಕಟಶಿವಾರೆಡ್ಡಿ ಅವರಿಗೆ ಇಂತಹ ಯಾವ ಜವಾಬ್ದಾರಿಯನ್ನು ಈತನಕ ನೀಡಿಲ್ಲ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಜಿ.ಟಿ.ದೇವೇಗೌಡರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಪ್ರಸಕ್ತ ವಿಧಾನಸಭೆಯಲ್ಲಿ ರೇವಣ್ಣ ಅವರು ಎಲ್ಲರಿಗಿಂತ ಹಿರಿಯ ಶಾಸಕರಾಗಿದ್ದಾರೆ.

ಅಧಿವೇಶನದಲ್ಲಿ ರಾಜ್ಯ ಸರ್ಕಾರ ಹಾಗೂ ಆಡಳಿತ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಉತ್ತಮ ಸಂಸದೀಯಪಟುವಾಗಿರುವವರು ಶಾಸಕಾಂಗ ಪಕ್ಷದ ನಾಯಕರಾಗಬೇಕು ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಚುನಾಯಿತರಾಗಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನವು ರದ್ದಾಗಲಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ಎದುರಾಗಲಿದೆ. ಕೇಂದ್ರ ಸರ್ಕಾರ ರಚನೆ ಪ್ರಕ್ರಿಯೆ ಮುಗಿದ ಬಳಿಕ ಪಕ್ಷದ ನಾಯಕರು ಸಭೆ ಸೇರಿ ನೂತನ ಶಾಸಕಾಂಗ ಪಕ್ಷದ ನಾಯಕ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಜೆಡಿಸ್‌‍ ಮೂಲಗಳು ತಿಳಿಸಿವೆ.

RELATED ARTICLES

Latest News