ಆಸ್ಪತ್ರೆಯಿಂದ ಎಸ್ಕೇಪ್ ಆಗಲೆತ್ನಿಸಿದ ಪತ್ನಿ-ಪುತ್ರಿಯನ್ನು ಕೊಂದಿದ್ದ ಕೊಲೆಗಡುಕ ಪತಿ ಅರೆಸ್ಟ್

Spread the love

Mysuru-Murder-Suicide

ಮೈಸೂರು, ಮೇ 29-ಪತ್ನಿ ಹಾಗೂ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟೆಕ್ಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯನಗರದ 4ನೆ ಹಂತ, ಬಸವನಹಳ್ಳಿ ವೃತ್ತ ಸಮೀಪದ ನಿವಾಸಿ ಪ್ರಜ್ವಲ್ (42) ಬಂಧಿತ ಟೆಕ್ಕಿ.
ಘಟನೆ ಹಿನ್ನೆಲೆ: ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಪ್ರಜ್ವಲ್-ಸವಿತಾ ದಂಪತಿಗೆ ಸಿಂಚನಾ ಎಂಬ 11 ವರ್ಷದ ಮಗಳಿದ್ದಳು.

ಒಂದು ವರ್ಷದ ಹಿಂದೆ ಪ್ರಜ್ವಲ್ ಕೆಲಸ ತ್ಯಜಿಸಿದ್ದರು. ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ ಪ್ರಜ್ವಲ್ ಕೌಟುಂಬಿಕ ವಿಚಾರವಾಗಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು ಎನ್ನಲಾಗಿದೆ.  ಈ ನಡುವೆ ಮೇ 23ರಂದು ಪತ್ನಿ ಹಾಗೂ ಮಗಳು ಮಲಗಿದ್ದಾಗ ಪ್ರಜ್ವಲ್ ಕುತ್ತಿಗೆ ಕೊಯ್ದು ಇಬ್ಬರನ್ನೂ ಭೀಕರವಾಗಿ ಕೊಲೆ ಮಾಡಿ ಎರಡು ದಿನಗಳ ಕಾಲ ಶವಗಳ ಬಳಿಯೇ ಇದ್ದು ಮೇ 25ರಂದು ಬೆಳಗಿನ ಜಾವ ಮದ್ಯದೊಂದಿಗೆ ವಿಷ ಬೆರೆಸಿ ಚಾಕುವಿನಿಂದ ಕುತ್ತಿಗೆ ಹಾಗೂ ಕೈ ಕೊಯ್ದುಕೊಂಡಿದ್ದನು.

ನೋವು ತಡೆಯಲಾರದೆ ಅಂದು ಬೆಳಗಿನ ಜಾವ ತಂದೆಗೆ ನಡೆದ ವಿಷಯವನ್ನೆಲ್ಲ ತಿಳಿಸಿದ್ದಾನೆ. ತಕ್ಷಣ ಈತನ ತಂದೆ ಮನೆಗೆ ಬಂದು ಮಗ ಪ್ರಜ್ವಲ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಪ್ರಜ್ವಲ್ ಚೇತರಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.  ವೈದ್ಯರಿಂದ ಪ್ರಜ್ವಲ್‍ನ ಆರೋಗ್ಯ ಸ್ಥಿತಿಯ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಈತ ಚೇತರಿಸಿಕೊಳ್ಳುತ್ತಿದ್ದಾರೆಂಬ ವೈದ್ಯರ ಹೇಳಿಕೆ ಮೇರೆಗೆ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಬಹುದೆಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು. ರಾತ್ರಿ ಪ್ರಜ್ವಲ್ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನನ್ನು ಪೊಲೀಸರು ಬಂಧಿಸಿ ವಿಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

Sri Raghav

Admin