ಬೆಂಗಳೂರು,ಮಾ.27- ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟವಾದ ಎನ್‍ಡಿಎ ನಡುವೆ ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನಕ್ಕೆ ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ. ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡ ಬೆನ್ನಲ್ಲೇ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ನಾಳೆ ಅಯೋಗವು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಹಬ್ಬವೆಂದೇ ಹೇಳಲಾಗುವ ಮತಸಮರಕ್ಕೆ ಚಾಲನೆ ಸಿಗಲಿದೆ. ಏ.4 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ.5ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.8ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಏ.26ರಂದು ಮತದಾನ ನಡೆದು ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಕೇಂದ್ರ ಚುನಾವಣಾ ಆಯೋಗ ಎರಡು ಹಂತದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಿದೆ.
ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳು ನಾಳೆ ಅಧಿಸೂಚನೆ ಪ್ರಕಟವಾಗಲಿದ್ದು, ಚಿತ್ರದುರ್ಗ ಮಲೆನಾಡಿನ ಚಿಕ್ಕಮಗಳೂರು-ಉಡುಪಿ, ಹಾಸನ ಕರಾವಳಿ ಭಾಗದ ದಕ್ಷಿಣ ಕನ್ನಡ ಕ್ಷೇತ್ರ ಹೊರತುಪಡಿಸಿದರೆ ಬಹುತೇಕ ಹಳೆ ಮೈಸೂರು ಭಾಗದ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.ಮೊದಲ ಹಂತದಲ್ಲಿ ನಡೆಯುವ 14 ಕ್ಷೇತ್ರಗಳಲ್ಲಿ ಕೋಲಾರ ಹಾಗೂ ಚಾಮರಾಜನಗರ ಪರಿಶಿಷ್ಟ ಜಾತಿಗೆ (ಎಸ್.ಸಿ) ಮೀಸಲು ಕ್ಷೇತ್ರಗಳಾಗಿದ್ದರೆ, ಉಳಿದ 12 ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಯುಪಿಎ ಮೈತ್ರಿಕೂಟ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡುವಲ್ಲಿ ವಿಫಲವಾಗಿತ್ತು. ಬೆಂಗಳೂರು ಗ್ರಾಮಾಂತರ, ಹಾಸನ ಕ್ಷೇತ್ರಗಳಲ್ಲಿ ಮೈತ್ರಿಕೂಟ ಗೆದ್ದರೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿಜೇತರಾಗಿದ್ದರು. ಉಳಿದಂತೆ 11 ಕ್ಷೇತ್ರಗಳಲ್ಲೂ ಪ್ರಧಾನಿ ನರೇಂದ್ರಮೋದಿ ಅಲೆಯಲ್ಲಿ ಬಿಜೆಪಿ ಗೆದ್ದು ಬೀಗಿತ್ತು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಕಾರದಲ್ಲಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಕಾಂಗ್ರೆಸ್‍ಗೆ ಕಳೆದ 10 ದಿನಗಳ ಅವಧಿಯಲ್ಲಿ ಮಾಡಿರುವ ಸರ್ಕಾರದ ಸಾಧನೆಗಳು ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂಬ ಅಚಲ ವಿಶ್ವಾಸವಿದೆ.
ಪಂಚ ಗ್ಯಾರಂಟಿಗಳಿಂದ ಮತದಾರರು ಸಂತೃಪ್ತರಾಗಿದ್ದು, ನಮ್ಮನ್ನು ಕೈ ಹಿಡಿಯಲಿದ್ದಾರೆ ಎಂಬ ಅಧಮ್ಯ ವಿಶ್ವಾಸ ಕೈಪಡೆಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜನಪ್ರಿಯತೆಯನ್ನು ಮತದಾರ ಓರೆಗೆ ಹಚ್ಚಲಿದ್ದಾನೆ.
ಬಿಜೆಪಿ ಸಾರಥ್ಯ ವಹಿಸಿರುವ ಬಿ.ವೈ.ವಿಜಯೇಂದ್ರರಿಗೂ ಪ್ರತಿಷ್ಠೆಯ ಕಣವಾಗಿದ್ದು, ಮೊದಲ ಹಂತದಲ್ಲೇ ಹೆಚ್ಚಿನ ಸ್ಥಾನ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರು-ಕೊಡುಗಿನಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಭಾರೀ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮತ್ತು ಹೆಸರಾಂತ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ನಡುವೆ ಹಣಾಹಣಿ ಇದೆ.
ಉಳಿದಂತೆ ಸ್ಪರ್ಧಾ ಕಣದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಮುದ್ದಹನುಮೇಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಯಧುವೀರ ಕೃಷ್ಣದತ್ತ ಪಡೆಯರ್ ಸೇರಿದಂತೆ ಹಲವರು ಕಣದಲ್ಲಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 5,42,54,500 ಮತದಾರರು ಇದ್ದಾರೆ. ಈ ಪೈಕಿ 2,71,21,407 ಪುರುಷರು, 2,70,81,748 ಮಹಿಳೆಯರು, 4,933 ತೃತೀಯ ಲಿಂಗಿಗಳಿದ್ದಾರೆ.
18ರಿಂದ 19 ವರ್ಷದ ವಯೋಮಾನದ ಯುವ ಮತದಾರರ ಸಂಖ್ಯೆ 11,24,622 ಹಾಗೂ 5,70,168 85 ವರ್ಷ ಮೇಲ್ಪಟ್ಟ ಹಿರಿಯರಿದ್ದಾರೆ. 58,834 ಒಟ್ಟು ಮತಗಟ್ಟೆಗಳು, 12,000 ಚುನವಣಾ ಸಿಬ್ಬಂದಿ ನಿಯೋಜಿಸಲಾಗುತ್ತದೆ.
ಉಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಏ.12ರಂದು ಅಸೂಚನೆ ಹೊರಡಿಸಲಾಗುತ್ತದೆ.
ಮತದಾನ ನಡೆಯುವ ಕ್ಷೇತ್ರಗಳು:
ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ( ಎಸ್ಸಿ ಮೀಸಲು ಕ್ಷೇತ್ರ), ತುಮಕೂರು, ಮಂಡ್ಯ, ಮೈಸೂರು-ಕೊಡುಗು
ಚಾಮರಾಜನಗರ ( ಎಸ್ಸಿ ಮೀಸಲು ಕ್ಷೇತ್ರ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ,ಚಿಕ್ಕಬಳ್ಳಾಪುರ, ಕೋಲಾರ ( ಎಸ್ಸಿ ಮೀಸಲು ಕ್ಷೇತ್ರ)
ಚುನಾವಣಾ ಪ್ರಕ್ರಿಯೆ
ಅಧಿಸೂಚನೆ ಮಾ.28( ಗುರುವಾರ)
ನಾಮಪತ್ರ ಸಲ್ಲಿಕೆ ಪ್ರಾರಂಭ- ಮಾ.28ರಿಂದ ಏ.4 ಕೊನೆಯ ದಿನ
ನಾಮಪತ್ರ ಪರಿಶೀಲನೆ- ಏ.5
ಏ.8- ನಾಮಪತ್ರ ಹಿಂಪಡೆಯಲು ಕೊನೆಯ ದಿನ
ಮತದಾನ -ಏ.26