Saturday, November 23, 2024
Homeರಾಜ್ಯ2 ತಿಂಗಳಿನಿಂದ ಮಳೆಯಾಗಿಲ್ಲ, ಬೇಸಿಗೆ ಬಿಸಿಲ ಅಬ್ಬರ

2 ತಿಂಗಳಿನಿಂದ ಮಳೆಯಾಗಿಲ್ಲ, ಬೇಸಿಗೆ ಬಿಸಿಲ ಅಬ್ಬರ

ಬೆಂಗಳೂರು : ಬೇಸಿಗೆ ಆರಂಭದಲ್ಲೇ ಬಿಸಿಲಿನ ಬೇಗೆ ತೀವ್ರಗೊಂಡಿದ್ದು, ಜನರು ತತ್ತರಿ ಸುವಂತಾಗಿದೆ. ಕಳೆದ 2 ತಿಂಗಳಿನಿಂದ ರಾಜ್ಯದಲ್ಲಿ ಮಳೆಯಾಗಿಲ್ಲ. ಅಲ್ಲದೆ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ತೀವ್ರ ಬರ ಉಂಟಾಗಿರುವುದರಿಂದ ವಾತಾವರಣ ದಲ್ಲಿ ಸರಾಸರಿ 1 ರಿಂದ 2 ಡಿ.ಸೆ. ಹೆಚ್ಚಳವಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೊಂದು ವಾರದಲ್ಲಿ 2-3 ಡಿ.ಸೆ. ನಷ್ಟು ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ. ಕಲಬುರಗಿಯಲ್ಲಿ 39.1 ಡಿ.ಸೆ. ನಷ್ಟು ಗರಿಷ್ಟ ಉಷ್ಣಾಂಶ ದಾಖಲಾಗಿದ್ದು, ಬೆಳಗಾವಿಯಲ್ಲಿ ಗರಿಷ್ಟ ಉಷ್ಣಾಂಶ 15.8 ಡಿ.ಸೆ. ನಷ್ಟು ದಾಖಲಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನರು ಎಳನೀರು, ಮಜ್ಜಿಗೆ ಸೇರಿದಂತೆ ತಂಪು ಪಾನೀಯ ಹಾಗೂ ಕಲ್ಲಂಗಡಿ, ಕರಬೂಜ ಸೇರಿದಂತೆ ವಿವಿಧ ಹಣ್ಣುಗಳ ಮೊರೆ ಹೋಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.

ಬಿಸಿಲಿನಿಂದ ಕೊಡೆ ಬಳಸಬೇಕು ಹಾಗೂ ಸಾಧ್ಯವಾದಷ್ಟು ಹೆಚ್ಚು ನೆರಳಿನ ವಾತಾವರಣದಲ್ಲಿ ಕೆಲಸ ಮಾಡುವುದು ಆರೋಗ್ಯಕರ. ಇಲ್ಲದಿದ್ದರೆ ಪ್ರಖರವಾದ ಬಿಸಿಲು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಮಾರ್ಚ್ 14 ರವರೆಗೂ ರಾಜ್ಯದಲ್ಲಿ ಒಣ ಹವೆ ಮುಂದುವರೆಯಲಿದ್ದು, ಮಳೆ ಬರುವ ಸಾಧ್ಯತೆಗಳು ಕಂಡುಬರುತ್ತಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಉತ್ತರ ಒಳನಾಡಿನ ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಆ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 36 ಡಿ.ಸೆ. ನಿಂದ 39 ಡಿ.ಸೆ. ವರೆಗೂ ದಾಖಲಾಗುತ್ತಿದೆ. ಅದೇ ರೀತಿ ಕರಾವಳಿಯಲ್ಲಿ 34 ರಿಂದ 36 ಡಿ.ಸೆ. ನಷ್ಟು ಗರಿಷ್ಟ ಉಷ್ಣಾಂಶ ಕಂಡುಬರುತ್ತಿದ್ದರೆ, ದಕ್ಷಿಣ ಒಳನಾಡಿನಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. 35 ರಿಂದ 37 ಡಿ.ಸೆ.ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಬೆಂಗಳೂರಿನಲ್ಲಿ ಉಷ್ಣಾಂಶ ಈಗಾಗಲೇ 35 ಡಿ.ಸೆ. ಗಡಿ ದಾಟಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸರಾಸರಿಗಿಂತ ಸುಮಾರು 2 ಡಿ.ಸೆ. ನಷ್ಟು ಗರಿಷ್ಠ ತಾಪಮಾನ ಹೆಚ್ಚಾಗಲು ರಾಜ್ಯದಲ್ಲಿ ಉಂಟಾಗಿರುವ ತೀವ್ರ ಸ್ವರೂಪದ ಬರ ಕಾರಣ ಎನ್ನಲಾಗಿದೆ. ಅಂತರ್ಜಲ ಕುಸಿತ, ಕೆರೆಕಟ್ಟೆಗಳು ಬತ್ತಿರುವುದು, ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿರುವುದು, ನಿರಂತರವಾಗಿ ಬಿಸಿಲು ಇರುವುದರಿಂದ ವಾತಾವರಣದಲ್ಲಿನ ತೇವಾಂಶವು ಕಡಿಮೆಯಾಗಿದೆ. ಇದರಿಂದ ಬೆಳಿಗ್ಗೆಯಿಂದಲೇ ಜನರು ಸೆಖೆಯಿಂದ ಬಳಲುವಂತಾಗಿದೆ. ಮಾರ್ಚ್-ಏಪ್ರಿಲ್‍ನಲ್ಲಿ ಪೂರ್ವ ಮುಂಗಾರು ಮಳೆಯಾಗುವುದು ವಾಡಿಕೆ. ಆದರೆ ಕಳೆದ ಎರಡು ತಿಂಗಳಿನಿಂದ ಬೇಸಿಗೆ ಮಳೆಯು ಬಿದ್ದಿಲ್ಲ. ಸದ್ಯಕ್ಕೆ ಇನ್ನೆರಡು ವಾರ ಅಕಾಲಿಕ ಮಳೆಯಾಗುವ ಸಾಧ್ಯತೆಗಳು ವಿರಳ ಎನ್ನುತ್ತಾರೆ ಹವಾಮಾನ ತಜ್ಞರು.

RELATED ARTICLES

Latest News