ನವದೆಹಲಿ,ಅ.11- ಹಿಂದಿ ಹೃದಯ ರಾಜ್ಯದಲ್ಲಿ ಗೆದ್ದು ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ ಒಳ ಹೊಡೆತವೇ ಮುಂದಿನ ವಿಧಾನಸಭೆ ಚುನಾವಣಾ ಫಲಿತಾಂಶದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‍ಘಡದಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ.
ಟಿಕೆಟ್ ಸಿಗದಿರುವವರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದರೆ ಇನ್ನು ಕೆಲವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದಾಗಿ ಸೆಡ್ಡು ಹೊಡೆದಿದ್ದಾರೆ. ಬಿಜೆಪಿಯ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ನವರಾತ್ರಿ ಹಬ್ಬದ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ರಾಜಕೀಯ ಜಾಣ್ಮೆಯನ್ನು ಪ್ರದರ್ಶಿಸಿದೆ.
ಬಿಜೆಪಿ ಆಡಳಿತ ಇರುವ ಮಧ್ಯಪ್ರದೇಶದಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆ ಪ್ರಬಲವಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ವಿರುದ್ಧ ಜನಾಕ್ರೋಶ ಇರುವುದರಿಂದ ಹಾಲಿ ಕೆಲವು ಸಚಿವರು ಮತ್ತು ಶಾಸಕರಿಗೆ ಟಿಕೆಟ್ ನೀಡದೆ ಕೋಕ್ ಕೊಡಲಾಗಿದೆ. ಆಡಳಿತ ವಿರೋಧಿ ಅಲೆಯನ್ನು ತಗ್ಗಿಸುವ ಕಾರಣಕ್ಕಾಗಿಯೇ ಈ ಬಾರಿ ಬಿಜೆಪಿ ಕೇಂದ್ರ ಸಚಿವರು ಮತ್ತು ಸಂಸದರನ್ನು ಕಣಕ್ಕಿಳಿಸಿದೆ. ಶಿವರಾಜ್ ಚವ್ಹಾಣ್ ಸಂಪುಟದಲ್ಲಿದ್ದ 24 ಸಚಿವರಿಗೆ ಮಾತ್ರ ಟಿಕೆಟ್ ನೀಡಿದ್ದರೆ ಉಳಿದವರಿಗೆ ಅರ್ಧ ನಾಮ ಹಾಕಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಶಿವರಾಜ್ ಸಿಂಗ್ ಚವ್ಹಾಣ್ ತಮ್ಮ ಬೆಂಬಲಿಗರಿಗೂ ಟಿಕೆಟ್ ಕೊಡಿಸುವ ಪರಿಸ್ಥಿತಿಯಲ್ಲಿಲ್ಲ. ಸ್ವತಃ ಅವರಿಗೆ ಪಕ್ಷವು 3ನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿತ್ತು. ಅರಮನೆಗಳ ನಗರಿ ಎಂದೇ ಖ್ಯಾತಿಯಾಗಿರುವ ರಾಜಸ್ಥಾನದಲ್ಲೂ ಬಿಜೆಪಿ, ಕಾಂಗ್ರೆಸ್ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವ ಹವಣಿಕೆಯಲ್ಲಿದೆ.
ಆದರೆ ರಾಜ್ಯದ ಪ್ರಭಾವಿ ನಾಯಕಿ ರಾಜವಂಶಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರ ರಾಜೆಗೆ ಟಿಕೆಟ್ ಕೊಡದಿರುವುದು ಪಕ್ಷದಲ್ಲಿ ಅವರನ್ನು ಕಡೆಗಣಿಸುತ್ತಿರುವುದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ವಸುಂಧರ ರಾಜೆ ಅವರ ಆಪ್ತರಾದ ರಾಜ್‍ಗೋಪಾಲ್ ಶೇಖಾವತ್ ಮೂರು ಬಾರಿ ಶಾಸಕರಾಗಿರುವ ನರಾಪಥ್ ಸಿಂಗ್ ರಾಜ್ವಿ ಸೇರಿದಂತೆ ಹಲವರಿಗೆ ಟಿಕೆಟ್ ಕೊಟ್ಟಿಲ್ಲ. ಇದು ಸಹಜವಾಗಿ ವಸುಂಧರ ರಾಜೇಯ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಹಲವು ಸಂಸದರನ್ನು ಅಖಾಡಕ್ಕಿಳಿಸಿದೆ.
ಪಾಕ್‌ನಲ್ಲಿ ಭಾರತದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಹತ್ಯೆಮಾಡಿದ ‘ಅಪರಿಚಿತರು’
ಜೋತ್ವಾರ ಕ್ಷೇತ್ರದಿಂದ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ರಾಜವರ್ಧನ್ ಸಿಂಗ್ ರಾಥೋಡ್, ದಿವ್ಯಾ ಕುಮಾರಿ ಸೇರಿದಂತೆ ಮತ್ತಿತರರಿಗೆ ಟಿಕೆಟ್ ಕೊಡಲಾಗಿದೆ. ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಸ್ವತಃ ವಸುಂಧರ ರಾಜೇ ಹೇಳಿಕೊಂಡಿದ್ದರೂ ಪರಿಸ್ಥಿತಿ ಮಾತ್ರ ಬೂದಿಮುಚ್ಚಿದ ಕೆಂಡದಂತಿದೆ.
ನಕ್ಸಲ್ ಪೀಡಿತ ಛತ್ತೀಸ್‍ಘಡದಲ್ಲೂ ಬಿಜೆಪಿ ಪರಿಸ್ಥಿತಿ ಭಿನ್ನವಾಗಿಲ್ಲ. ರಾಜ್ಯದಲ್ಲಿ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಕೆಂದರೆ ಬಿಜೆಪಿ ಛತ್ತೀಸ್‍ಗಢ ಚುನಾವಣೆಗೆ 64 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಬಿಡುಗಡೆ ಮಾಡಿರುವ ಎರಡನೇ ಪಟ್ಟಿ ಬಳಿಕ ದಾಂತೇವಾಡದಲ್ಲಿ ಅಭ್ಯರ್ಥಿಗಳ ಅತೃಪ್ತಿ ಬಯಲಿಗೆ ಬರುತ್ತಿದೆ.
ದಾಂತೇವಾಡ ಮಾಜಿ ಶಾಸಕ ಭೀಮಾ ಮಾಂಡವಿ ಅವರ ಪುತ್ರಿ ದೀಪಾ ಮಾಂಡವಿ ಅವರಿಂದ ಇದೀಗ ಮೊದಲ ಪ್ರತಿಕ್ರಿಯೆ ಬಂದಿದ್ದು, ನನ್ನ ತಂದೆ ಬಿಜೆಪಿಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ತಂದೆಯ ಮರಣದ ನಂತರ ತಾಯಿ ಓಜಸ್ವಿ ಪಕ್ಷದಲ್ಲಿ ಸಕ್ರಿಯರಾಗಿದ್ದರು, ಆದರೂ ಪಕ್ಷವು ಆ ತ್ಯಾಗವನ್ನು ಒಪ್ಪಿಕೊಂಡಿಲ್ಲ. ಟಿಕೆಟ್ ಕೊಡದೆ ಅವಮಾನ ಮಾಡಿದ್ದಾರೆ ಎಂದುಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಇಂದಿರಾ ಕ್ಯಾಂಟಿನ್ ರೀ ಓಪನ್‍ಗೆ ಅಡ್ಡಿಯಾಯ್ತೇ ಗ್ಯಾರಂಟಿ ಯೋಜನೆಗಳು..?
ಶಾಸಕರಾಗಿ ಆಯ್ಕೆಯಾಗಿದ್ದ ಭೀಮಾ ಮಾಂಡವಿ:
ದಿವಂಗತ ಭೀಮಾ ಮಾಂಡವಿ 2018ರ ಚುನಾವಣೆಯಲ್ಲಿ ದಂತೇವಾಡ ಕ್ಷೇತ್ರದಿಂದ ಗೆದ್ದಿದ್ದರು. ಭೀಮಾ ಕಾಂಗ್ರೆಸ್‍ನ ದೇವಿತ್ ಕರ್ಮ ಅವರನ್ನು ಸೋಲಿಸುವ ಮೂಲಕ ವಿಜಯಶಾಲಿಯಾಗಿದ್ದರು, ಆದರೆ ಲೋಕಸಭೆ ಚುನಾವಣೆಯ ಸಮಯದಲ್ಲಿ ಅವರು ನಕ್ಸಲೈಟ್ ದಾಳಿಯಲ್ಲಿ ನಿಧನರಾದರು. ನಂತರ ಪಕ್ಷವು ಅವರ ಪತ್ನಿ ಓಜಸ್ವಿ ಅವರನ್ನು ದಂತೇವಾಡದಲ್ಲಿ ಉಪ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಿತು. ಇದರಲ್ಲಿ ಓಜಸ್ವಿ ಮಾಂಡವಿ ಕಾಂಗ್ರೆಸ್‍ನ ದೇವ್ತಿ ಕರ್ಮಾ ವಿರುದ್ಧ ಸೋತರು, ಆದರೆ ಅವರ ಪತಿಗಿಂತ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ದಾಂತೇವಾಡದಲ್ಲಿ ಬಿಜೆಪಿ ಟಿಕೆಟ್‍ಗಾಗಿ ನಾಲ್ವರು ಪ್ರಮುಖ ಸ್ರ್ಪಗಳಿದ್ದು, ಓಜಸ್ವಿ ಮಾಂಡವಿ, ಚೈತ್ರಂ ಅಟಾಮಿರ್, ರಾಮು ನೇತಮ್, ನಂದಲಾಲ್ ಮುದಾಮಿ ಈ ಪಟ್ಟಿಯಲ್ಲಿದ್ದಾರೆ. ಆದರೆ ಓಜಸ್ವಿ ಮತ್ತು ನಂದಲಾಲ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.