Friday, May 3, 2024
Homeರಾಜ್ಯಸಿಎಂಗೆ 7ನೇ ರಾಜ್ಯ ವೇತನ ಆಯೋಗ ವರದಿ ಸಲ್ಲಿಕೆ, ಶೇ.27.5ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸ್ಸು

ಸಿಎಂಗೆ 7ನೇ ರಾಜ್ಯ ವೇತನ ಆಯೋಗ ವರದಿ ಸಲ್ಲಿಕೆ, ಶೇ.27.5ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸ್ಸು

ಬೆಂಗಳೂರು,ಮಾ.16-ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಲಾಗಿದ್ದ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ಇಂದು ವರದಿ ಸಲ್ಲಿಸಿದ್ದು, ಶೇ.27.5ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸ್ಸು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ವರದಿಯನ್ನು ಪಡೆದುಕೊಂಡರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7ನೇ ವೇತನ ಆಯೊಗದ ವರದಿಯಲ್ಲಿ ಹಲವಾರು ಶಿಫಾರಸ್ಸುಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಸರ್ಕಾರಿ ನೌಕರರ ವೇತನವನ್ನು ಶೇ.27.5ರಷ್ಟು ಹೆಚ್ಚಿಸಬೇಕು ಎಂಬುದು ಸೇರಿದೆ. ಆಯೋಗದ ಶಿಫಾರಸ್ಸನ್ನು ಆರ್ಥಿಕ ಇಲಾಖೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸಲಹೆ ನೀಡಲಿದೆ. ಆ ಬಳಿಕ ವರದಿ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.

2022ರ ನವೆಂಬರ್ 19ರಂದು ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿತ್ತು. ಮಧ್ಯಂತರ ವರದಿಯಲ್ಲಿ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇ.17ರಷ್ಟನ್ನು ಹೆಚ್ಚಳ ಮಾಡಿ ಹಿಂದಿನ ಸರ್ಕಾರ ಆದೇಶ ಹೊರಡಿಸಿತ್ತು. ಇಂದು ಸಲ್ಲಿಕೆಯಾಗಿರುವ ಅಂತಿಮ ವರದಿ ಅನುಷ್ಠಾನಕ್ಕೆ ಬರುವವರೆಗೂ ಶೇ.17ರ ಪ್ರಮಾಣ ಮಧ್ಯಂತರ ಪರಿಹಾರ ಮುಂದುವರೆಯಲಿದೆ ಎಂದು ಹೇಳಿದರು.

ಆಯೋಗಕ್ಕೆ ಅಂತಿಮ ವರದಿ ನೀಡಲು ಈಗಾಗಲೇ ಮೂರು ತಿಂಗಳ ಕಾಲಾವಕಾಶ ವಿಸ್ತರಣೆ ಮಾಡಲಾಗಿತ್ತು. ನಿನ್ನೆಗೆ ಅದು ಮುಕ್ತಾಯಗೊಂಡಿದೆ. ತಾವು ನಿನ್ನೆ ಮೈಸೂರಿನಲ್ಲಿ ಇದ್ದುದ್ದರಿಂದ ವರದಿ ಪಡೆದುಕೊಳ್ಳಲಾಗಿರಲಿಲ್ಲ. ಇಂದು ವರದಿ ಸ್ವೀಕರಿಸಿದ್ದೇನೆ. ಅಂತಿಮ ವರದಿಯಲ್ಲಿ ಕನಿಷ್ಠ ಮೂಲ ವೇತನವನ್ನು 17 ಸಾವಿರದಿಂದ 27 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಉಳಿದಂತೆ ಹಲವು ಶಿಫಾರಸ್ಸುಗಳ ಬಗ್ಗೆ ಆರ್ಥಿಕ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.

ಆಯೋಗದ ಅಧ್ಯಕ್ಷರಾಗಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರು ವರದಿ ಬಗ್ಗೆ ಮಾಹಿತಿ ನೀಡಿದ್ದು, ಮೂಲ ವೇತನದಲ್ಲಿ ಶೇ.27.5ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಶೇ.17ರಷ್ಟು ವೇತನ ಪರಿಷ್ಕರಣೆ ಅಂತಿಮ ವರದಿ ಜಾರಿಯಾದ ಬಳಿಕ ಸ್ಥಗಿತಗೊಳ್ಳಲಿದೆ. ಒಟ್ಟಾರೆ. 27.5ರ ಒಳಗಿನ ಪ್ರಮಾಣದಲ್ಲಿ ಸರ್ಕಾರ ವೇತನ ಪರಿಷ್ಕರಣೆ ಮಾಡಬಹುದು ಎಂದು ಹೇಳಿದರು.

ಈಗಾಗಲೇ ಶೇ.31ರಷ್ಟು ಡಿಎ ಹೆಚ್ಚಳವಾಗಿದೆ. 2017-18ರಲ್ಲಿ ಮೂಲ ವೇತನ 17 ಸಾವಿರ ರೂ.ಗಳಷ್ಟಾಗಿದ್ದು, ಈ ಎಲ್ಲ ಆರ್ಥಿಕ ಅನುಕೂಲಗಳನ್ನು ಒಳಗೊಂಡು 27 ಸಾವಿರ ರೂ.ಗಳಿಗೆ ಹೆಚ್ಚಾಗಬಹುದು ಎಂದು ತಿಳಿಸಿದರು. ಎಚ್‍ಆರ್‍ಎ ಸೇರಿದಂತೆ ಇತರೆ ಆರ್ಥಿಕ ಸೌಲಭ್ಯಗಳನ್ನು ಹೆಚ್ಚಿಸಲು ಸಲಹೆ ನೀಡಲಾಗಿದೆ. ಜೊತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಕೇಂದ್ರ ಸರ್ಕಾರದ ಪದ್ಧತಿಯನ್ನೇ ರೂಢಿಸಿಕೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ. ಪ್ರತಿ 5 ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸುವುದು ಮತ್ತು ವೇತನ ಹೆಚ್ಚಳ ಮಾಡಲಾಗುತ್ತಿದೆ.

ಆದರೆ ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸರಿಸಮನಾಗಿ ರಾಜ್ಯ ಸರ್ಕಾರಿ ನೌಕರರ ವೇತನಗಳು ಹೆಚ್ಚಳವಾಗಿಲ್ಲ. ಇದಕ್ಕಾಗಿ ಕೇಂದ್ರದ ಮಾರ್ಗಸೂಚಿಗಳನ್ನೇ ಪಾಲನೆ ಮಾಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವಿನ ತಾರತಮ್ಯ ತಗ್ಗಲಿದೆ. ಕೇಂದ್ರ ಸರ್ಕಾರಿ ವೇತನ ಆಯೋಗಕ್ಕೆ ಸರಿಸಮನಾಗಿ ರಾಜ್ಯ ಸರ್ಕಾರದ ಆಯೋಗಗಳು ಅಸ್ತಿತ್ವಕ್ಕೆ ಬರಲಿದೆ ಎಂದು ವಿವರಿಸಿದರು.

ಶೇ.27.5ರಷ್ಟು ವೇತನ ಪರಿಷ್ಕರಣೆಯನ್ನು 2022ರ ಜುಲೈ 1ರಿಂದ ಪೂರ್ವಾನ್ವಯಗೊಳಿಸುವಂತೆ ಅಂತಿಮ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಆಯೋಗದ ಶಿಫಾರಸ್ಸನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತಂದರೆ 2024-25ನೇ ಸಾಲಿಗೆ 17,447 ಕೋಟಿ ರೂ.ಗಳ ಆರ್ಥಿಕ ಹೊರೆಯಾಗಲಿದೆ ಎಂದು ಸುಧಾಕರ್ ರಾವ್ ತಿಳಿಸಿದರು.

ಆಯೋಗದ ಸದಸ್ಯರಾದ ಪಿ.ಬಿ.ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ, ಸದಸ್ಯ ಕಾರ್ಯದರ್ಶಿ ಹೆಪ್ಸಿಬಾರಾಣಿ ಪೊರ್ಲಾಪಾಟಿ, ಸಚಿವರಾದ ಜಮೀರ್ ಅಹಮ್ಮದ್ ಖಾನ್, ಶಿವರಾಜ್ ತಂಗಡಗಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜರಾಯ ರೆಡ್ಡಿ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News