ಬೆಂಗಳೂರು, ಏ.21-ನಾಳೆಯಿಂದ ಆರಂಭಗೊಳ್ಳಲಿರುವ ಸಿಇಟಿ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ದಾಖಲೆ ಪ್ರಮಾಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಂದಿರುವುದರಿಂದ ಸಿಇಟಿ ಪರೀಕ್ಷೆಗೆ ಈಗಾಗಲೇ 3. 30 ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ರಾಜ್ಯದ 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಸ್ತುತ ಏ.22, 23 ಮತ್ತು 24 ರಂದು ಪರೀಕ್ಷೆ ನಡೆಯುತ್ತಿದ್ದು, ಕೆಇಎ ಯಾವುದೇ ಲೋಪವಿಲ್ಲದೇ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸಕಲ ತಯಾರಿ ನಡೆಸಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆಯನ್ನು ಕೂಡ ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪರೀಕ್ಷಾ ಬರೆಯುವ ವಿದ್ಯಾರ್ಥಿಗಳಿಗೆ ಸ್ಕ್ಯಾನಿಂಗ್ ವ್ಯವಸ್ಥೆ ಮೂಲಕ ಗುರುತು ಖಾತರಿಪಡಿಸಿಕೊಳ್ಳಲಾಗುತ್ತಿದೆ.ವೃತ್ತಿ ಶಿಕ್ಷಣದ ಆಯ್ಕೆಗಾಗಿ ನಡೆಯುವ ಈ ಪ್ರಮುಖ ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿಂಗ್, ದಂತ ವೈದ್ಯಕೀಯ, ಹಾಗೂ ಫಾರ್ಮಸಿ ಸೇರಿದಂತೆ ವಿವಿಧ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅವಕಾಶ ಸಿಗಲಿದೆ.
ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪೂರ್ಣ ತೋಳಿ ಶರ್ಟುಗಳನ್ನು ಬಳಸುವಂತಿಲ್ಲ, ಸಾಧ್ಯವಾದಷ್ಟು ಟಿ-ಶರ್ಟ್ ಕಾಲರ್ ರಹಿತ ಶರ್ಟ್ಗಳನ್ನು ಧರಿಸಬೇಕು.ಕುರ್ತಾ ಫೈಜಾಮ, ಜೀನ್್ಸ ಪ್ಯಾಂಟ್ನಲ್ಲಿ ಬಂದರೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಲಾಗಿದೆ.
ಪರೀಕ್ಷಾ ಕೊಠಡಿಗೆ ಪ್ರವೇಶಿಸುವಾಗಿ ಶೂ ಧರಿಸಿದವರು ಹೊರಗೆ ಬಿಟ್ಟು ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ.ವಿದ್ಯಾರ್ಥಿಗಳು ಖಡ್ಗ ಸೇರಿದಂತೆ ಯಾವುದೇ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿನಿಯರು ಸರಳವಾದ ಬಟ್ಟೆಗಳನ್ನು ಧರಿಸಬೇಕು. ಎತ್ತರವಾದ ಹಿಮಡಿಯ ಶೂ, ಚಪ್ಪಲಿ ಧರಿಸಬಾರದು.
ಮೊಬೈಲ್ ಫೋನ್ಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ನಿಷೇಧಿಸಲಾಗಿದೆ. ತಿನ್ನುವ ವಸ್ತು ಹಾಗೂ ಲೋಹದ ಕುಡಿಯುವ ನೀರಿನ ಬಾಟಲ್ಗಳನ್ನು ಕೂಡ ಕೊಠಡಿಯೊಳಗೆ ನಿಷೇಧಿಸಲಾಗಿದೆ. ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು, ಯಾವುದೇ ರೀತಿಯ ಮುಖಮುಚ್ಚುವ ಮಾಸ್ಕ್ ಆಗಲಿ ಟೋಪಿ ಆಗಲಿ ಧರಿಸುವುದು ಕೂಡಾ ನಿರ್ಭಂಧಿಸಲಾಗಿದೆ.
ಪ್ರವೇಶ ಪತ್ರವನ್ನು ಎಲ್ಲಾ ಆಭ್ಯರ್ತಿಗಳು ಕಡ್ಡಾಯವಾಗಿ ತರಬೇಕು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಫೋಟೋ ಗುರುತಿನ ಚೀಟಿ ಕೂಡ ತರಬೇಕು. ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಕೊಠಡಿಯಿಂದ ಯಾವುದೇ ವಿದ್ಯಾರ್ಥಿಗಳನ್ನು ಕಳುಹಿಸಲು ಅನುಮತಿ ಇರುವುದಿಲ್ಲ.
ಈಗಾಗಲೇ ತಿಳಿಸಿರುವಂತೆ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಕೂಡ ಪೊಲೀಸರು ಬಿಗಿ ಭದ್ರತೆಗಳನ್ನು ಕಲ್ಪಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಗಸ್ತು ಭದ್ರತಾ ವಾಹನಗಳನ್ನು ಕೂಡಾ ನಿಯೋಜಿಸಲಾಗಿದೆ.
