ಬೆಂಗಳೂರು,ಏ.23– ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶದಲ್ಲೂ ಐತಿಹಾಸಿಕ ಶೇ.94.1 ರಷ್ಟು ಫಲಿತಾಂಶ ಬಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂದಿನಂತೆ ಈ ಬಾರಿಯೂ ಶೇ.96.18 ರಷ್ಟು ಬಾಲಕಿಯರು ತೇರ್ಗಡೆಯಾಗಿ ಮೇಲುಗೈ ಸಾಧಿಸಿದ್ದಾರೆ ಎಂದರು.
2025-26ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 7,70,209 ವಿದ್ಯಾರ್ಥಿಗಳಲ್ಲಿ 7,24,794 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷ ಶೇ.80.4 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಸುಧಾರಣಾ ಕ್ರಮಗಳನ್ನು ಕೈಗೊಂಡ ಪರಿಣಾಮ ಫಲಿತಾಂಶದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು.
3,92,922 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 3,77,922 ಬಾಲಕಿಯರು ತೇರ್ಗಡೆಯಾಗಿದ್ದಾರೆ. 3,77,287 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 3,46,872 ಬಾಲಕರು ತೇರ್ಗಡೆಯಾಗಿದ್ದು, ಶೇ.91.94 ರಷ್ಟು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಾಲಕರ ತೇರ್ಗಡೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದರು.
4,42,280 ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4,19,261 ಗ್ರಾಮೀಣ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.94.80 ರಷ್ಟು ಫಲಿತಾಂಶ ಬಂದಿದ್ದು, ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು ತೇರ್ಗಡೆ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ನಗರ ಪ್ರದೇಶದಲ್ಲಿ 3,27,929 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 3,05,533 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.93.2 ರಷ್ಟು ಉತ್ತೀರ್ಣರಾಗಿದ್ದಾರೆ. 6,176 ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಅದರಲ್ಲಿ 2,393 ಸರ್ಕಾರಿ ಶಾಲೆಗಳು ಸೇರಿವೆ. 27 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಅದರಲ್ಲಿ ಯಾವುದೇ ಸರ್ಕಾರಿ ಶಾಲೆ ಇಲ್ಲ ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಶೇ.93.97, ಅನುದಾನಿತ ಶಾಲೆಗಳಲ್ಲಿ ಶೇ.92.94, ಅನುದಾನರಹಿತ ಶಾಲೆಗಳಲ್ಲಿ ಶೇ.95.04 ರಷ್ಟು ಫಲಿತಾಂಶ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು :
625 ಅಂಕಗಳನ್ನು 7 ವಿದ್ಯಾರ್ಥಿಗಳು, 624 ಅಂಕಗಳನ್ನು 21 ವಿದ್ಯಾರ್ಥಿಗಳು, 623 ಅಂಕಗಳನ್ನು 28 ವಿದ್ಯಾರ್ಥಿಗಳು, 622 ಅಂಕಗಳನ್ನು 74 ವಿದ್ಯಾರ್ಥಿಗಳು, 621 ಅಂಕಗಳನ್ನು 98 ವಿದ್ಯಾರ್ಥಿಗಳು, 620 ಅಂಕಗಳನ್ನು 150 ವಿದ್ಯಾರ್ಥಿಗಳು ಪಡೆದಿದ್ದು, ಆಯಾ ಶಾಲೆಗಳಿಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಅಥಣಿ ತಾಲ್ಲೂಕಿನ ಕಟಗೇರಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ್, ಚನ್ನಗಿರಿ ತಾಲ್ಲೂಕಿನ ಕಬ್ಬಾಲದ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಭರತ್ ಜಿ., ಚಿಕ್ಕಮಗಳೂರು ತಾಲ್ಲೂಕಿನ ಸೇಂಟ್ ಮೇರೀಸ್ ಹೈಸ್ಕೂಲ್ ಪೋರ್ಟ್‌ನ ವಿದ್ಯಾರ್ಥಿನಿ ಬೃಂದಾ ಎಂ. ತಪ್ಸೆ, ಸದಾಶಿವನಗರದ ಪೂರ್ಣಪ್ರಜ್ಞಾ ಎಜುಕೇಷನ್ ಸೆಂಟರ್‌ನ ವಿದ್ಯಾರ್ಥಿ ಧನುಷ್‌ಸುಧೀರ್ ಮೈಸೂರು, ಕುಂದಾಪುರದ ಮದರ್ ತೆರೇಸಾ ಮೆಮೊ ಶಾಲೆಯ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ, ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಆಕ್‌್ಸಫರ್ಡ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸೌಜನ್ಯ ಬಸವರಾಜ್ ಕಂದಕೂರ್ ಹಾಗೂ ಮಾನ್ವಿ ತಾಲ್ಲೂಕಿನ ಬಿಆರ್‌ವಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸುಖದೇವ್ ಅವರು ತಲಾ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಮಾ.18 ರಿಂದ ಏ.2 ರವರೆಗೆ 2870 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದ್ದು, ನೋಂದಣಿಯಾಗಿದ್ದ 8,66,046 ವಿದ್ಯಾರ್ಥಿಗಳಲ್ಲಿ 8,56,516 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟಾರೆ ಶೇ.88.73 ರಷ್ಟು ತೇರ್ಗಡೆಯಾಗಿದ್ದಾರೆ. ಪುನರಾವರ್ತಿತ ಅಭ್ಯರ್ಥಿಗಳು ಶೇ.53.43ರಷ್ಟು, ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಶೇ.8.42 ರಷ್ಟು ಹಾಗೂ ಖಾಸಗಿ ಫ್ರೆಶ್ ಅಭ್ಯರ್ಥಿಗಳು ಶೇ.60.45 ರಷ್ಟು ತೇರ್ಗಡೆಯಾಗಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಫಲಿತಾಂಶ ರವಾನೆ :
ಈ ಬಾರಿಯ ಫಲಿತಾಂಶವನ್ನು ಎಸ್‌ಎಂಎಸ್ ಮೂಲಕ ಮಧ್ಯಾಹ್ನ 11.50 ಗಂಟೆಗೆ ತಲುಪಿಸಲಾಗಿದೆ. ಇದೇ ಮೊದಲ ಬಾರಿಗೆ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.ಕನ್ನಡ ಮಾಧ್ಯಮದ ಶೇ.92.6 ರಷ್ಟು ಆಂಗ್ಲ ಮಾಧ್ಯಮದ ಶೇ.96.16 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಶೇ.9.41 ರಷ್ಟು ಎ ಪ್ಲಸ್, ಶೇ.17.99 ರಷ್ಟು ಎ, ಶೇ.19.45 ರಷ್ಟು ಬಿ ಪ್ಲಸ್, ಶೇ.19.68 ರಷ್ಟು ಬಿ, ಶೇ.17.76 ರಷ್ಟು ಸಿ ಪ್ಲಸ್, ಶೇ.15.71 ರಷ್ಟು ಸಿ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಶೇ.60.5 ರಷ್ಟಿದೆ. ತೇರ್ಗಡೆಯ ಅಂಕಗಳನ್ನು ಶೇ.35 ರಿಂದ 33 ಕ್ಕೆ ಇಳಿಸಲಾಗಿದೆ. ಶೇ.33 ರಿಂದ 35 ರ ಅಂತರದಲ್ಲಿ 1,532 ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದಾರೆ ಎಂದರು.
ಪ್ರಥಮ ಭಾಷೆಯಲ್ಲಿ ಶೇ.97.24, ದ್ವಿತೀಯ ಭಾಷೆಯಲ್ಲಿ ಶೇ.98.13, ತೃತೀಯ ಭಾಷೆಯಲ್ಲಿ ಶೇ.98.55, ಗಣಿತದಲ್ಲಿ ಶೇ.97.98, ವಿಜ್ಞಾನದಲ್ಲಿ ಶೇ.97.80, ಸಾಮಾಜಿಕ ವಿಜ್ಞಾನದಲ್ಲಿ ಶೇ.97.85 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಪ್ರಥಮ ಭಾಷೆ ಕನ್ನಡದಲ್ಲಿ 10,341, ಇಂಗ್ಲಿಷ್‌ನಲ್ಲಿ 43 ವಿದ್ಯಾರ್ಥಿಗಳು ಶೇ.100 ರಷ್ಟು ಅಂಕಗಳನ್ನು ಗಳಿಸಿದ್ದಾರೆ. 4099 ವಿಶೇಷ ಚೇತನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3,621 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.88 ರಷ್ಟು ಫಲಿತಾಂಶ ಬಂದಿದೆ.
ಶೇ.98.18 ರಷ್ಟು ಫಲಿತಾಂಶ ಪಡೆದು ಉಡುಪಿ ಮೊದಲ ಸ್ಥಾನ, ಶೇ.98.09 ರಷ್ಟು ಫಲಿತಾಂಶ ಪಡೆದು ಉ.ಕನ್ನಡ ದ್ವಿತೀಯ ಸ್ಥಾನ ಪಡೆದಿದೆ. ಕಳೆದ ಬಾರಿ ಕಡಿಮೆ ಫಲಿತಾಂಶವಿದ್ದ ಯಾದಗಿರಿ, ಚಿತ್ರದುರ್ಗ, ಕಲಬುರಗಿ ಜಿಲ್ಲೆಗಳಲ್ಲೂ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇ 19.9 ರಷ್ಟು ಫಲಿತಾಂಶ ಹೆಚ್ಚು ಬಂದಿದೆ. ಈ ಬಾರಿ ಶೇ.91.6 ರಷ್ಟು ಕಲ್ಯಾಣ ಕರ್ನಾಟಕದಲ್ಲಿ ಫಲಿತಾಂಶ ಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶಿ ವಿ. ಮಹೇಶ್, ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ವಿಕಾಸ್ ಕಿಶೋರ್ ಸುರಾಳ್ಕರ್, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ಜಿ ನಿತ್ತಾಳ್, ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಭರತ್, ಸರ್ವಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ವಿದ್ಯಾಕುಮಾರಿ ಉಪಸ್ಥಿತರಿದ್ದರು.
