ಬೆಂಗಳೂರು,ಏ.23- ಪ್ರಸಕ್ತ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ 2ನೇ ಪರೀಕ್ಷೆಯು ಮೇ 18ರಿಂದ 25ರವರೆಗೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ 1ರ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವವರಿಗೆ 2ನೇ ಪರೀಕ್ಷೆ ತೆಗೆದುಕೊಳ್ಳುವ ವೇಳೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದರು.
ಪ್ರತಿ ವರ್ಷ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2ನೇ ಪರೀಕ್ಷೆಯ ಸಂದರ್ಭದಲ್ಲಿ 250 ರೂ. ಶುಲ್ಕವನ್ನು ತೆಗೆದುಕೊಳ್ಳಲಾಗುತ್ತಿತ್ತು. ಈ ಬಾರಿ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರಬಹುದೆಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ : ಐತಿಹಾಸಿಕ ಶೇ.94.1ರಷ್ಟು ರಿಸಲ್ಟ್
ಈ ಬಾರಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿರುವುದರಿಂದ ಎಸ್ಸೆಸ್ಸೆಲ್ಸಿ 3ನೇ ಪರೀಕ್ಷೆ ಇರುವುದಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಗೊಂದಲವೂ ಬೇಡ ಎಂದು ಹೇಳಿದರು.
ಉತ್ತರಪತ್ರಿಕೆಗಳ ಸ್ಕ್ಯಾನ್ ಪಡೆದು ಅರ್ಜಿ ಸಲ್ಲಿಸಲು ಏ.23ರಿಂದ 26ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮರು ಎಣಿಕೆ ಮತ್ತು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಏ.28ರಿಂದ ಮೇ 4ರವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.
