ಬೆಂಗಳೂರು,ಏ.23- ಪ್ರಧಾನಿ ನರೇಂದ್ರಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು.
ವಿಧಾನಸೌಧ-ವಿಕಾಸಸೌಧ ಮಧ್ಯಭಾಗದಲ್ಲಿರುವ ರಾಷ್ಟ್ರಪಿತ ಮಹಾತ ಗಾಂಧಿ ಪ್ರತಿಮೆ ಎದುರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಮತ್ತಿತರರು ಪ್ರತಿಭಟನೆ ನಡೆಸಿ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾನಿರತರು ಎಐಸಿಸಿ ಅಧ್ಯಕ್ಷರಾಗಲು ಅವರಿಗೆ ಅರ್ಹತೆ ಇಲ್ಲ. ದೇಶದ ಪ್ರಧಾನಿಯನ್ನೇ ಅತ್ಯಂತ ಕೀಳುಮಟ್ಟದಲ್ಲಿ ಟೀಕೆ ಮಾಡಿರುವ ಅವರಿಗೆ ನೈತಿಕತೆ ಇದ್ದರೆ ತಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರು ದೇಶ ವಿರೋಧಿ ಮನಸ್ಥಿತಿಯನ್ನು ತೋರಿಸಿದ್ದಾರೆ. ಖರ್ಗೆಯವರು ದೇಶದ ಜನತೆಗೆ ಕ್ಷಮೆ ಕೇಳಬೇಕು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡಲೇ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಖರ್ಗೆ ಅವರನ್ನು ತೆಗೆದು ಹಾಕಬೇಕು ಎಂದು ವಾಗ್ದಾಳಿ ಮಾಡಿದರು.
ಮಲ್ಲಿಕಾರ್ಜುನ ಖರ್ಗೆ ಉನ್ನತ ಮಟ್ಟಕ್ಕೆ ಏರಿದ್ದಾರೆ. ಅವರಿಗೆ ಒಂದೇ ಗುರಿ. ತಾನು ಉನ್ನತ ಸ್ಥಾನದಲ್ಲಿರಬೇಕು, ನನ್ನ ಮಗ ಉನ್ನತ ಸ್ಥಾನದಲ್ಲಿರಬೇಕು, ಹಾಗಾಗಿ ರಾಹುಲ್ ಗಾಂಧಿ ಅವರನ್ನು ಹೊಗಳುತ್ತಾರೆ. ಅವರ ಹೇಳಿಕೆ ನಮ ದೇಶಕ್ಕಿಂತ ಪಾಕಿಸ್ತಾನ ವಿದೇಶಗಳಲ್ಲಿ ತೋರಿಸುತ್ತಿದ್ದಾರೆ. ಇವರು ವಿದೇಶಿ ಏಜೆಂಟ್ ಆಗಿ ವರ್ತಿಸುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಮುಸ್ಲಿಂ ಸಮುದಾಯ ಓಲೈಸಲು ನಮಾಜ್ ಮಾಡುವಾಗ ವಿಷದ ಹಾವನ್ನು ಕೊಲ್ಲಿ ಎಂದು ಹೇಳುತ್ತಾರೆ. ಹಾಗೆಯೇ ಆರ್‌ಎಸ್‌ಎಸ್ ನವರನ್ನೂ ಹೊಡೆದು ಹಾಕಿ ಎನ್ನುತ್ತಾರೆ. ಇದೊಂದು ಕೊಲೆ ಯತ್ನಕ್ಕೆ ಸಮನಾದ ಪ್ರಕರಣ ಎಂದು ಕಿಡಿಕಾರಿದರು.
ದೇಶಕ್ಕೆ ಆಗುವ ಅವಮಾನ ಎಲ್ಲರಿಗೂ ಅವಮಾನವೇ. ಆದರೆ ಕಾಂಗ್ರೆಸ್ ಹಾಗೆ ಯೋಚನೆ ಮಾಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಪದೇ ಪದೇ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಧಾನಿಗೆ ಉಗ್ರ ಎನ್ನುವುದು ದೊಡ್ಡ ಅವಮಾನ. ನಾನು ಸೋನಿಯಾ ಹಾಗೂ ರಾಹುಲ್ ಗಾಂಧಿಯವರಿಗೆ ಒತ್ತಾಯಿಸುವುದೇನೆಂದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಆಗ್ರಹಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರು ಪ್ರಪಂಚವೇ ಮೆಚ್ಚಿ ಹೌದೌದು ಅನ್ನುವಂತ ವ್ಯಕ್ತಿ. ಅವರನ್ನು ಭಯೋತ್ಪಾದಕ ಎಂದ ಖರ್ಗೆ ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಅನುಭವ ಮತ್ತು ಹಿರಿತನ ಮೀರಿ ತಪ್ಪು ಮಾತನಾಡುತ್ತಿದ್ದಾರೆ. ನಮಾಜ್ ನಿಲ್ಲಿಸಿ ಹಾವು ಕೊಲ್ಲಿ ಎಂದಿದ್ದರು. ಖರ್ಗೆ ಏನು ಮಾಡಲು ಹೊರಟಿದ್ದಾರೆ? ಕೋಮು ಸೌಹಾರ್ದ ಕದಡುವ ಕೆಲಸ ಮಾಡಿದರೆ ದೇಶದ ಜನ ಸಹಿಸುವುದಿಲ್ಲ ಎಂದು ವಾಗ್ದಾಳಿ ಮಾಡಿದರು.
ನಿಮ ಮಗ ಪ್ರಿಯಾಂಕ್ ಖರ್ಗೆ ಅನನುಭವಿ. ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಾರೆ. ಈಗ ತಾವು ಚಾಳಿ ಶುರು ಮಾಡಿದ್ದಾರೆ. 140 ಕೋಟಿ ಜನ ನಿಮನ್ನ ಪ್ರಶ್ನೆ ಮಾಡುತ್ತಿದ್ದಾರೆ. ಸ್ವಜನ ಪಕ್ಷ ಪಾತ ಮಾಡಬೇಡಿ. ಇದರಿಂದ ಕಾಂಗ್ರೆಸ್ ನಶಿಸಿ ಹೋಗುತ್ತದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾನಿರತರು ಗಾಂಧಿ ಪ್ರತಿಮೆಯಿಂದ ಕೆಂಗಲ್ ಹನುಮಂತಯ್ಯ ಪ್ರತಿಮೆವರೆಗೂ ಪಾದಯಾತ್ರೆ ನಡೆಸಿದರು. ಕೈಯಲ್ಲಿ ಭಿತ್ತಿಪತ್ರ ಹಿಡಿದು ಕಾಂಗ್ರೆಸ್ ಮತ್ತು ಖರ್ಗೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
