ಬೆಂಗಳೂರು, ಮೇ 21-ಚಿನಿವಾರಪೇಟೆಯಲ್ಲಿ ಮತ್ತೆ ಚಿನ್ನ ಮತ್ತು ಬೆಳ್ಳಿ ದರಗಳು ಚೇತರಿಕೆ ಕಂಡಿವೆ. ನಿರಂತರ ಇಳಿಕೆಯ ನಂತರ ಚಿನ್ನ ಮತ್ತು ಬೆಳ್ಳಿಯ ದರಗಳು ಮತ್ತೆ ಏರುಗತಿಯಲ್ಲಿ ಸಾಗುತ್ತಿವೆ.
ಮೇ 15ರಿಂದ ಮೇ 18ರವರೆಗೆ 4 ದಿನಗಳ ಕಾಲ ಇಳಿಮುಖವಾಗಿದ್ದ ಚಿನ್ನದ ದರವು ಮೇ 19ರಿಂದ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಚಿನ್ನದ ದರ ಹೆಚ್ಚಳವಾಗುತ್ತಿರುವುದರಿಂದ ಗ್ರಾಹಕರಲ್ಲಿ ಆತಂಕ ಉಂಟಾಗಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ 24 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ ಮೇ 19ರಂದು 82 ರೂ., ಮೇ 20ರಂದು 240 ರೂ. ಹಾಗೂ ಇಂದು 49 ರೂ. ನಷ್ಟು ಹೆಚ್ಚಳವಾಗಿದೆ. ಒಂದು ಗ್ರಾಂಗೆ ಪ್ರಸ್ತುತ 15,993 ರೂ. ನಷ್ಟಿದೆ.
ಇದೇ ರೀತಿ 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ನ ಚಿನ್ನಾಭರಣಗಳ ದರದಲ್ಲೂ ನಿರಂತರ ಏರಿಕೆ ಕಂಡುಬಂದಿದೆ. 22 ಕ್ಯಾರೆಟ್ನ ಚಿನ್ನ ಒಂದು ಗ್ರಾಂಗೆ ಇಂದು 45 ರೂ.ನಷ್ಟು ಏರಿಕೆಯಾಗಿದ್ದು, 14,660 ರೂ.ನಷ್ಟಿದೆ. 18 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 37 ರೂ.ನಷ್ಟು ಹೆಚ್ಚಳವಾಗಿದ್ದು, 11,995 ರೂ.ಗೆ ತಲುಪಿದೆ.
ಆದರೆ, ಪ್ಲಾಟಿನಮ್ ದರದಲ್ಲಿ ಇಳಿಕೆಯಾಗಿದೆ. 10 ಗ್ರಾಂಗೆ 940 ರೂ.ನಷ್ಟು ಕಡಿಮೆಯಾಗಿದ್ದು, ಪ್ರಸ್ತುತ 59,810 ರೂ.ಗೆ ತಲುಪಿದೆ.ಮೇ 14ರಿಂದ ಇಳಿಮುಖವಾಗಿದ್ದ ಬೆಳ್ಳಿ ದರವು, ಮೇ 18ರಂದು ಒಂದು ಕೆ.ಜಿ.ಗೆ 10 ಸಾವಿರ ರೂ ನಷ್ಟು ಏರಿಕೆಯಾಗಿತ್ತು. ಬಳಿಕ ಎರಡು ದಿನಗಳ ಕಾಲ ನಿರಂತರ ಇಳಿಮುಖವಾಗಿ ಸಾಗಿದ್ದ ಬೆಳ್ಳಿ ದರ ಇಂದು ಮತ್ತೆ ಏರಿಕೆಯಾಗಿದೆ.
ಮೇ 19 ಮತ್ತು 20ರಂದು ನಿತ್ಯ ಐದು ಸಾವಿರ ರೂ. ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಒಂದು ಕೆ.ಜಿ.ಗೆ ಐದು ಸಾವಿರ ರೂ.ಗಳಷ್ಟು ಏರಿಕೆಯಾಗಿದ್ದು, 2.85 ಲಕ್ಷ ರೂ.ಗೆ ತಲುಪಿದೆ.ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷ ಕಾಲ ಚಿನ್ನ ಖರೀದಿ ಮುಂದೂಡುವಂತೆ ಕರೆ ನೀಡಿದ ಬೆನ್ನಲ್ಲೇ ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತವಾಗುತ್ತಿದೆ.
ಇದರಿಂದ ಚಿನ್ನಾಭರಣಗಳ ಮಾರಾಟದಲ್ಲಿ ಕುಸಿತವಾಗಿದ್ದು, ಮಾರಾಟಗಾರರು, ಚಿನ್ನ ಮತ್ತು ಬೆಳ್ಳಿ ಆಭರಣಗಳ ತಯಾರಕರು ಹಾಗೂ ಈ ಉದ್ಯಮದ ಅವಲಂಬಿತರು ಗೊಂದಲಕ್ಕೆ ಒಳಗಾಗಿದ್ದಾರೆ. ಭವಿಷ್ಯದಲ್ಲಿ ಬೆಲೆ ಸ್ಥಿರವಾಗುವುದೇ? ಅಥವಾ ಮತ್ತುಷ್ಟು ಏರಿಕೆಯಾಗಲಿದೆಯೇ? ಇಲ್ಲವೇ ಇಳಿಕೆಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
