Homeರಾಜ್ಯಇನ್ಮುಂದೆ ಆನ್‌ಲೈನ್‌ನಲ್ಲಿ ಟಿಡಿಆರ್‌ ಖರೀದಿಗೆ ಅವಕಾಶ

ಇನ್ಮುಂದೆ ಆನ್‌ಲೈನ್‌ನಲ್ಲಿ ಟಿಡಿಆರ್‌ ಖರೀದಿಗೆ ಅವಕಾಶ

ಬೆಂಗಳೂರು, ನ.3- ಸೈಟ್‌ಗಳು, ಮನೆಗಳು ಹಾಗೂ ಫ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮತ್ತು ಮಾರಾಟ ಮಾಡುವ ಮಾದರಿಯಲ್ಲೇ ಇನ್ಮುಂದೆ ಟಿಡಿಆರ್‌ ಪ್ರಮಾಣಪತ್ರಗಳನ್ನೂ ಆನ್‌ಲೈನ್‌ನಲ್ಲೇ ಖರೀದಿ ಮತ್ತು ಮಾರಾಟ ಮಾಡಲು ಅವಕಾಶ ಕಲ್ಪಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ತೀರ್ಮಾನಿಸಿದೆ.

ನೋ ಬ್ರೋಕರ್‌ ಸೇರಿದಂತೆ ವಿವಿಧ ರಿಯಲ್‌ ಎಸ್ಟೇಟ್‌ ಆ್ಯಪ್‌ಗಳ ಮಾದರಿ ಯಲ್ಲಿ ಸರ್ಕಾರದಿಂದಲೇ ಅಧಿಕೃತ ಡಿಜಿಟಲ್‌ ವೇದಿಕೆ ರೂಪಿಸಲು ಯೋಜನೆ ಸಿದ್ಧವಾಗುತ್ತಿದೆ. ನಗರದಲ್ಲಿ ರಸ್ತೆ ಅಗಲೀಕರಣ, ಹೊಸ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಭೂಮಿ ಬಿಟ್ಟುಕೊಡುವ ಮಾಲೀಕರಿಗೆ ಸರ್ಕಾರ ಟಿಡಿಆರ್‌ ಪ್ರಮಾಣಪತ್ರ ನೀಡುತ್ತದೆ.

ಆದರೆ ಈ ಪ್ರಮಾಣಪತ್ರಗಳನ್ನು ಮಾರಾಟ ಮಾಡಲು ಅಥವಾ ಅಗತ್ಯವಿರುವವರು ಖರೀದಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪರಿಣಾಮವಾಗಿ ನೂರಾರು ಕೋಟಿ ರೂಪಾಯಿ ಮೌಲ್ಯದ ಟಿಡಿಆರ್‌ ಪ್ರಮಾಣಪತ್ರಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇದರಿಂದ ಭೂಮಾಲೀಕರಿಗೆ ಆರ್ಥಿಕ ಸಂಕಷ್ಟದ ಜತೆಗೆ ಕಾನೂನು ತೊಡಕುಗಳೂ ಎದುರಾಗುತ್ತಿವೆ.ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಟಿಡಿಆರ್‌ ವ್ಯವಸ್ಥೆಯನ್ನೇ ಸಂಪೂರ್ಣ ಡಿಜಿಟಲೀಕರಣಗೊಳಿಸಲು ಸರ್ಕಾರ ಮುಂದಾಗಿದೆ.

ಈ ಸಂಬಂಧ ವಿಕಾಸಸೌಧದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಟಿಡಿಆರ್‌ ಮಂಜೂರಾತಿಯಿಂದ ಹಿಡಿದು ಖರೀದಿ, ಮಾರಾಟ ಹಾಗೂ ಅಂತಿಮ ಬಳಕೆಯವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌‍ ವೇದಿಕೆಗೆ ತರಲು ಸೂಚನೆ ನೀಡಿದ್ದಾರೆ.

ಕಾಗದದ ಕಡತಗಳಿಗೆ ಮುಕ್ತಿ:ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಸ್ತೆ ಅಗಲೀಕರಣ ಮತ್ತು ಹೊಸ ರಸ್ತೆಗಳ ನಿರ್ಮಾಣ ಅನಿವಾರ್ಯವಾಗಿದೆ. ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸುವ ಟಿಡಿಆರ್‌ ವ್ಯವಸ್ಥೆ ಹಲವು ವರ್ಷಗಳಿಂದ ಕಾಗದದ ಕಡತಗಳ ಮೂಲಕವೇ ನಡೆಯುತ್ತಿದೆ. ಸಮರ್ಪಕ ಟ್ರ್ಯಾಕಿಂಗ್‌ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಉಂಟಾಗಿದ್ದು, ಜನರಲ್ಲಿ ಟಿಡಿಆರ್‌ ವ್ಯವಸ್ಥೆಯ ಮೇಲಿನ ವಿಶ್ವಾಸವೂ ಕಡಿಮೆಯಾಗಿದೆ ಎಂದು ಸಚಿವರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.ಹೀಗಾಗಿ ರಸ್ತೆ ಮತ್ತು ಆಸ್ತಿಯ ವಿವರಗಳ ಪರಿಶೀಲನೆಯ ಆರಂಭಿಕ ಹಂತದಿಂದ ಹಿಡಿದು, ವಿವಿಧ ಹಂತಗಳ ಅನುಮೋದನೆ ಹಾಗೂ ಅಂತಿಮವಾಗಿ ಟಿಡಿಆರ್‌ ಪ್ರಮಾಣಪತ್ರ ವಿತರಿಸುವವರೆಗಿನ ಎಲ್ಲ ಪ್ರಕ್ರಿಯೆಗಳನ್ನು ಡಿಜಿಟಲ್‌ ವ್ಯವಸ್ಥೆಗೆ ಒಳಪಡಿಸಲು ಸೂಚಿಸಿದ್ದಾರೆ.

ನಾಗರಿಕರು ತಮ್ಮ ಅರ್ಜಿಗಳು ಯಾವ ಹಂತದಲ್ಲಿವೆ ಎಂಬುದನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸುವ ಮತ್ತು ಟ್ರ್ಯಾಕ್‌ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.ನೋ ಬ್ರೋಕರ್‌ ಮಾದರಿಯಲ್ಲಿ ಖರೀದಿ-ಮಾರಾಟಈ ಯೋಜನೆಯ ಪ್ರಮುಖ ಆಕರ್ಷಣೆಯೆಂದರೆ ಟಿಡಿಆರ್‌ ಪ್ರಮಾಣಪತ್ರಗಳ ಖರೀದಿ ಮತ್ತು ಮಾರಾಟಕ್ಕೂ ಪ್ರತ್ಯೇಕ ಆನ್‌ಲೈನ್‌‍ ವ್ಯವಸ್ಥೆ ರೂಪಿಸುವುದು.

ಪ್ರಸ್ತುತ ಟಿಡಿಆರ್‌ ಹೊಂದಿರುವ ಭೂಮಾಲೀಕರು ಖರೀದಿದಾರರನ್ನು ಹುಡುಕಲು ಸಾಕಷ್ಟು ಅಲೆದಾಡಬೇಕಿದೆ. ಅದೇ ರೀತಿ ಟಿಡಿಆರ್‌ ಅಗತ್ಯವಿರುವವರು ಸೂಕ್ತ ಮಾರಾಟಗಾರರನ್ನು ಪತ್ತೆಹಚ್ಚಲು ಮಧ್ಯವರ್ತಿಗಳ ಮೊರೆ ಹೋಗಬೇಕಾದ ಪರಿಸ್ಥಿತಿಯಿದೆ.ಇದನ್ನು ತಪ್ಪಿಸಲು ನೋ ಬ್ರೋಕರ್‌ನಂತಹ ರಿಯಲ್‌ ಎಸ್ಟೇಟ್‌ ಡಿಜಿಟಲ್‌ ವೇದಿಕೆಗಳ ಮಾದರಿಯಲ್ಲಿ ಟಿಡಿಆರ್‌ ಮಾರಾಟಗಾರರು ಮತ್ತು ಖರೀದಿದಾರರು ನೇರವಾಗಿ ಸಂಪರ್ಕ ಸಾಧಿಸುವ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುವುದರ ಜತೆಗೆ ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚಲಿದೆ. ಹೊಸ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.ವಿಶ್ವಾಸಾರ್ಹ ವ್ಯವಸ್ಥೆ ನಿರ್ಮಾಣಕ್ಕೆ ಒತ್ತು:ಟಿಡಿಆರ್‌ ಪ್ರಮಾಣಪತ್ರದ ಮಂಜೂರಾತಿ, ವಹಿವಾಟು ಮಾತ್ರವಲ್ಲದೆ ಅದರ ಅಂತಿಮ ಬಳಕೆಯ ಪ್ರಕ್ರಿಯೆಯನ್ನೂ ಆನ್‌ಲೈನ್‌ಗೆ ತರಲಾಗುತ್ತದೆ. ಇದರಿಂದ ಅನಗತ್ಯ ವಿಳಂಬ, ದಾಖಲೆಗಳ ಹಾವಳಿ ಹಾಗೂ ಸಾರ್ವಜನಿಕರಿಗೆ ಆಗುವ ಕಿರುಕುಳ ತಪ್ಪಲಿದೆ. ಭೂಮಾಲೀಕರು ಮತ್ತು ಸಾರ್ವಜನಿಕರಲ್ಲಿ ಟಿಡಿಆರ್‌ ವ್ಯವಸ್ಥೆಯ ಮೇಲಿನ ವಿಶ್ವಾಸ ಮರುಸ್ಥಾಪನೆಯಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News