Homeರಾಷ್ಟ್ರೀಯಮಧ್ಯಪ್ರದೇಶ : ಪೊಲೀಸ್‌‍ ಅಧಿಕಾರಿ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡನ ಬಂಧನ

ಮಧ್ಯಪ್ರದೇಶ : ಪೊಲೀಸ್‌‍ ಅಧಿಕಾರಿ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡನ ಬಂಧನ

ಭೋಪಾಲ್‌‍, ನ.3 – ಮಧ್ಯಪ್ರದೇಶದ ದೇವಾಸ್‌‍ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಣೆ ವಿರುದ್ಧದ ಕಾರ್ಯಾಚರಣೆ ವೇಳೆ ವಾಹನ ಹರಿದು ಪೊಲೀಸ್‌‍ ಅಧಿಕಾರಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.ಬಂಧಿತನನ್ನು ರಾಹುಲ್‌ ಜೈಸ್ವಾಲ್‌‍, ಈತ ಕಾಂಗ್ರೆಸ್‌‍ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಮದ್ಯದಂಗಡಿಯೊಂದರಲ್ಲಿ ಶೇ.30ರಷ್ಟು ಪಾಲುದಾರಿಕೆ ಹೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಶೇಷ ಪೊಲೀಸ್‌‍ ಮಹಾನಿರ್ದೇಶಕ ಉಪೇಂದ್ರ ಜೈನ್‌ ನೇತೃತ್ವದಲ್ಲಿ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ತಂಡದ ಅಧಿಕಾರಿಯೊಬ್ಬರು ಜೈಸ್ವಾಲ್‌ ವಿಚಾರಣೆ ವೇಳೆ ನೀಡಿರುವ ಹೇಳಿಕೆಯ ವಿಡಿಯೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ವಿಚಾರಣೆ ವೇಳೆ ಮಾತನಾಡಿರುವ ಜೈಸ್ವಾಲ್‌‍, ಪ್ರಸ್ತುತ ಕಾಂಗ್ರೆಸ್‌‍ನ ಖತೇಗಾಂವ್‌ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ, 2018ರಿಂದ 2024-25ರವರೆಗೆ ಜಿಲ್ಲಾ ಯುವ ಕಾಂಗ್ರೆಸ್‌‍ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದಾಗಿ ತಿಳಿಸಿದ್ದಾನೆ.

ಖತೇಗಾಂವ್‌ ಪೊಲೀಸ್‌‍ ಠಾಣೆಯ ಠಾಣಾಧಿಕಾರಿ (ಎಸ್‌‍ಎಚ್‌ಒ) ದಿಲೀಪ್‌ ಪುರಿ ಸೋಮವಾರ ಮುಂಜಾನೆ ಮೃತಪಟ್ಟಿರುವುದು ಪ್ರಕರಣದ ಹಿನ್ನೆಲೆಯಾಗಿದೆ. ಅಕ್ರಮ ಮದ್ಯ ಸಾಗಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಅವರು, ಇಂದೋರ್‌-ಬೆತುಲ್‌ ರಾಷ್ಟ್ರೀಯ ಹೆದ್ದಾರಿಗೆ ತೆರಳಿದ್ದರು.

ಅಲ್ಲಿ ರಸ್ತೆ ಬದಿಯ ಹೋಟೆಲ್‌ ಸಮೀಪ ನಿಲ್ಲಿಸಿದ್ದ ಟ್ರಕ್‌ ಚಾಲಕನನ್ನು ವಿಚಾರಿಸಲು ಪುರಿ ಮುಂದಾಗಿದ್ದರು. ಈ ವೇಳೆ ಚಾಲಕ ಪೊಲೀಸರಿಂದ ತಪ್ಪಿಸಿಕೊಳ್ಳಲು ರಸ್ತೆ ವಿಭಜಕವನ್ನು ದಾಟಿ ಟ್ರಕ್‌ ಚಲಾಯಿಸಿದ್ದಾನೆ. ಟ್ರಕ್‌ನ ಹಿಂಬದಿ ಚಕ್ರ ಪುರಿ ಅವರ ಮೇಲೆ ಹರಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಜೈಸ್ವಾಲ್‌ ಮಾತ್ರವಲ್ಲದೆ, ಕೇರಂ ಸಿಂಗ್‌ ಚಾಂಗೋಡ್‌ ಮತ್ತು ವಿಜಯ್‌ ರಾವ್‌ ಎಂಬ ಮತ್ತಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹರ್ದಾ ಜಿಲ್ಲೆಯ ತಿಮರ್ನಿಯಿಂದ ಗುಜರಾತ್‌ಗೆ ಅಕ್ರಮವಾಗಿ ಮದ್ಯ ಸಾಗಿಸುವ ಜಾಲವನ್ನು ರಾಹುಲ್‌ ಜೈಸ್ವಾಲ್‌ ನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಸಾಗಣೆಗೆ ಗಜೇಂದ್ರ ಅಲಿಯಾಸ್‌‍ ಅಕ್ಕು ರಾವತ್‌ ಎಂಬ ಚಾಲಕನಿಗೆ ಟ್ರಕ್‌ ಒದಗಿಸುತ್ತಿದ್ದ ಎನ್ನಲಾಗಿದೆ. ವಿಜಯ್‌ ರಾವ್‌ ಕೂಡ ರಾಹುಲ್‌ ಜೈಸ್ವಾಲ್‌ ಪರವಾಗಿ ಅಕ್ರಮ ಮದ್ಯ ಸಾಗಣೆ ಜಾಲದಲ್ಲಿ ಕೆಲಸ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್‌‍ ಅಧಿಕಾರಿ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌‍ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಮಧ್ಯಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಾಫಿಯಾಗಳೇ ಸರ್ಕಾರವನ್ನು ನಡೆಸುತ್ತಿವೆ. ಸರ್ಕಾರ ಮಾತ್ರ ಮೂಕಪ್ರೇಕ್ಷಕವಾಗಿದೆ ಎಂದು ಆರೋಪಿಸಿತ್ತು.

ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ಪ್ರಕರಣದಲ್ಲಿ ಕಾಂಗ್ರೆಸ್‌‍ ನಾಯಕನೊಬ್ಬನ ಪಾತ್ರವಿದೆ ಎಂದು ಆರೋಪಿಸಿತ್ತು. ಅಕ್ರಮ ಮದ್ಯ ವ್ಯಾಪಾರದಿಂದ ಬಂದ ಹಣವನ್ನು ಕಾಂಗ್ರೆಸ್‌‍ ರಾಜ್ಯ ಕಚೇರಿಯ ವಿದ್ಯುತ್‌ ಬಿಲ್‌ ಪಾವತಿ, ಪಕ್ಷದ ಪ್ರತಿಭಟನೆಗಳು ಹಾಗೂ ಇತರ ವೆಚ್ಚಗಳಿಗೆ ಬಳಸಲಾಗುತ್ತಿದೆಯೇ ಎಂದು ಪ್ರಶ್ನಿಸಿತ್ತು.

ಮಧ್ಯಪ್ರದೇಶದ ಸಚಿವ ವಿಶ್ವಾಸ್‌‍ ಸಾರಂಗ್‌ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದ ಮದ್ಯದಂಗಡಿಯಲ್ಲಿ ಕಾಂಗ್ರೆಸ್‌‍ ನಾಯಕ ರಾಹುಲ್‌ ಜೈಸ್ವಾಲ್‌ ಮತ್ತು ಆತನ ಸಹೋದರ ಮನೀಷ್‌ ಜೈಸ್ವಾಲ್‌ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಂಗಡಿಯ ವ್ಯವಸ್ಥಾಪಕ ಭೂಪೇಂದ್ರ ರಾಣಾ ಈ ಕುರಿತು ಪೊಲೀಸರಿಗೆ ಮಹತ್ವದ ಮಾಹಿತಿ ನೀಡಿದ್ದಾರೆ ಎಂದು ಸಾರಂಗ್‌ ತಿಳಿಸಿದ್ದಾರೆ.

ರಾಹುಲ್‌ ಜೈಸ್ವಾಲ್‌ ಕಾಂಗ್ರೆಸ್‌‍ನ ಖತೇಗಾಂವ್‌ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದು, ರಾಜ್ಯ ಕಾಂಗ್ರೆಸ್‌‍ ಅಧ್ಯಕ್ಷ ಜಿತು ಪಟ್ವಾರಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ಎಂದೂ ಸಾರಂಗ್‌ ಹೇಳಿದ್ದಾರೆ.

RELATED ARTICLES

Latest News