Homeರಾಜ್ಯಕನ್ನಡಿಗರಿಗೆ ಉದ್ಯೋಗಾವಕಾಶಕ್ಕಾಗಿ ಆರಂಭಿಸಿರುವ ಕರವೇ ಅಭಿಯಾನವನ್ನು ಅವಮಾನಿಸಿದ ತಮಿಳುನಾಡು ಐಪಿಎಸ್‌‍ ಅಧಿಕಾರಿ

ಕನ್ನಡಿಗರಿಗೆ ಉದ್ಯೋಗಾವಕಾಶಕ್ಕಾಗಿ ಆರಂಭಿಸಿರುವ ಕರವೇ ಅಭಿಯಾನವನ್ನು ಅವಮಾನಿಸಿದ ತಮಿಳುನಾಡು ಐಪಿಎಸ್‌‍ ಅಧಿಕಾರಿ

ಬೆಂಗಳೂರು, ನ.3- ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಮಿಕೊಂಡಿರುವ ಅಭಿಯಾನದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳುನಾಡು ಕೇಡರ್‌ನ ಐಪಿಎಸ್‌‍ ಅಧಿಕಾರಿ ಧನುಷ್‌ ಕುಮಾರ್‌ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ ಡಿಲಿಟ್‌ ಮಾಡಿದ್ದಾರೆ.

ಕರವೇ ಕಾರ್ಯಕರ್ತರು ನಗರದ ವಿವಿಧ ಐಟಿ ಕಂಪನಿಗಳಿಗೆ ಭೇಟಿ ನೀಡಿ, ಉದ್ಯೋಗಿಗಳ ವಿವರ ಹಾಗೂ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ಮನವಿ ಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಈ ಅಭಿಯಾನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಧನುಷ್‌ ಕುಮಾರ್‌ ಅವರು, ಕೆಲಸವಿಲ್ಲದವರು ಇತರರು ಕೆಲಸ ಮಾಡುವುದನ್ನು ತಡೆಯುತ್ತಿದ್ದಾರೆ ಎಂಬ ಅರ್ಥದ ಹೇಳಿಕೆ ನೀಡಿದ್ದರು.

ಈ ಪೋಸ್ಟ್‌ನ ಸ್ಕ್ರೀನ್‌ಶಾಟ್‌‍ ವೈರಲ್‌ ಆಗುತ್ತಿದ್ದಂತೆ ಕನ್ನಡಿಗರ ಉದ್ಯೋಗ ಹಕ್ಕುಗಳಿಗಾಗಿ ನಡೆಯುತ್ತಿರುವ ಅಭಿಯಾನವನ್ನು ಅವಹೇಳನ ಮಾಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಯಿತು.ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಐಟಿ ಉದ್ಯಮಿ ಅರುಣ್‌ ಜಾವಗಲ್‌ ಅವರು ಅಧಿಕಾರಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರನ್ನು ಟ್ಯಾಗ್‌ ಮಾಡಿ, ನಿಮ್ಮ ಸರ್ಕಾರದ ಉದ್ಯೋಗಿಯಾಗಿರುವ ಅಧಿಕಾರಿಯೊಬ್ಬರು ಕನ್ನಡಿಗರ ನ್ಯಾಯಯುತ ಅಭಿಯಾನದ ವಿರುದ್ಧ ಈ ರೀತಿ ಪ್ರತಿಕ್ರಿಯಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ಅಧಿಕಾರಿ ತಮ್ಮ ಪೋಸ್ಟ್‌ ಅಳಿಸಿದ್ದಾರೆ.

ನೇಮಕಾತಿ ಮಾಹಿತಿ ಕೇಳುವುದೇ ಕೆಲಸಕ್ಕೆ ಅಡ್ಡಿಯೇ?ಐಟಿ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ದೊರೆಯುತ್ತಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಸಂಗ್ರಹಿಸುವುದು ಕರವೇಯ ಆಗ್ರಹ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಕಂಪನಿಗಳಲ್ಲಿರುವ ಒಟ್ಟು ಉದ್ಯೋಗಿಗಳ ಸಂಖ್ಯೆ, ಅವರಲ್ಲಿ ಕನ್ನಡಿಗರ ಪ್ರಮಾಣ, ಕಳೆದ ಮೂರು ವರ್ಷಗಳಲ್ಲಿ ನಡೆದ ನೇಮಕಾತಿ, ನೇಮಕಾತಿ ಮಾನದಂಡಗಳು ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ನೀಡುತ್ತಿರುವ ಅವಕಾಶಗಳ ಕುರಿತು ಸಂಘಟನೆ ಮಾಹಿತಿ ಕೇಳುತ್ತಿದೆ.

ಈ ಸಂಬಂಧ ಕರವೇ ಪ್ರತಿನಿಧಿಗಳು ವಿವಿಧ ಕಂಪನಿಗಳಿಗೆ ಮನವಿ ಪತ್ರ ಸಲ್ಲಿಸುತ್ತಿದ್ದಾರೆ. ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರಿಗೆ ಸಿಗುತ್ತಿರುವ ಅವಕಾಶಗಳ ಕುರಿತು ಸ್ಪಷ್ಟತೆ ಪಡೆಯುವುದು ಮತ್ತು ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಸರ್ಕಾರದ ಗಮನ ಸೆಳೆಯುವುದು ಸಂಘಟನೆಯ ಉದ್ದೇಶವಾಗಿದೆ. ಕಂಪನಿಗಳು ಮಾಹಿತಿ ನೀಡುವ ಅಥವಾ ನಿರಾಕರಿಸುವ ನಿರ್ಧಾರ ಕೈಗೊಳ್ಳಬಹುದಾದರೂ, ಮಾಹಿತಿ ಕೇಳುವ ಪ್ರಕ್ರಿಯೆಯನ್ನೇ ಕೆಲಸಕ್ಕೆ ಅಡ್ಡಿಪಡಿಸುವಿಕೆ ಎಂದು ಬಿಂಬಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎದ್ದಿದೆ.

ಶಾಂತಿಯುತ ಅಭಿಯಾನಕ್ಕೆ ತಪ್ಪು ಚಿತ್ರಣ; ಕಂಪನಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಘೋಷಣೆ ಕೂಗಬಾರದು, ಸಂಘರ್ಷಕ್ಕೆ ಇಳಿಯಬಾರದು ಹಾಗೂ ಉದ್ಯೋಗಿಗಳ ಕೆಲಸಕ್ಕೆ ಯಾವುದೇ ರೀತಿಯ ಅಡ್ಡಿಪಡಿಸಬಾರದು ಎಂದು ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.

ನವೆಂಬರ್‌ ತಿಂಗಳಾದ್ಯಂತ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಯಾನ ಮುಂದುವರಿಯಲಿದ್ದು, ಈ ವೇಳೆ ಸಂಗ್ರಹಿಸುವ ಮಾಹಿತಿ ಮತ್ತು ಉದ್ಯೋಗಾಕಾಂಕ್ಷಿಗಳ ದೂರುಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವ ಉದ್ದೇಶವಿದೆ.

ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಪ್ರಶ್ನಿಸುವುದು ಅಪರಾಧವಲ್ಲ. ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ದೊರೆಯುತ್ತಿರುವ ಅವಕಾಶಗಳ ಬಗ್ಗೆ ಮಾಹಿತಿ ಕೇಳುವುದನ್ನು ಕೆಲಸಕ್ಕೆ ಅಡ್ಡಿಪಡಿಸುವಿಕೆ ಎಂದು ಬಿಂಬಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕನ್ನಡಿಗರ ಉದ್ಯೋಗ ಹಕ್ಕುಗಳ ಕುರಿತು ನಡೆಯುತ್ತಿರುವ ಅಭಿಯಾನದ ಬಗ್ಗೆ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಬೇಕಾದ ಅಧಿಕಾರಿಯೊಬ್ಬರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ತೀವ್ರ ವಿರೋಧದ ಬಳಿಕ ಪೋಸ್ಟ್‌ ಅಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Latest News