ಬೆಂಗಳೂರು,ಮೇ21- ಕುಟುಂಬದ ಜವಾಬ್ದಾರಿಗಳು ಮಹಿಳೆಯರ ವೃತ್ತಿಜೀವನದ ನಿರ್ಧಾರಗಳ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತಿವೆ ಎಂದು ಇಂಡೀಡ್ ಸಂಸ್ಥೆಯ ಹೊಸ ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.83ರಷ್ಟು ಮಹಿಳೆಯರು, ಮನೆ-ಕುಟುಂಬದ ಜವಾಬ್ದಾರಿಗಳ ಜೊತೆಗೆ ಕೆಲಸವನ್ನು ನಿಭಾಯಿಸುವುದು ಕಷ್ಟ ಎಂದು ಅನಿಸಿದ್ದರಿಂದಲೇ ತಾವು ಕೆಲಸಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಇಂಡೀಡ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಶಶಿ ಕುಮಾರ್ ಅವರು ಮಾತನಾಡಿ, ಅನೇಕ ಮನೆಗಳಲ್ಲಿ ಕುಟುಂಬದ ಜವಾಬ್ದಾರಿಗಳನ್ನು ಎಲ್ಲರೂ ಹಂಚಿಕೊಂಡರೂ ಸಹ, ಭಾರತದ ಮಹಿಳೆಯರು ತಮ ವೃತ್ತಿಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಈ ಜವಾಬ್ದಾರಿಗಳ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ ಎಂಬುದನ್ನು ಈ ಸಮೀಕ್ಷೆ ತೋರಿಸುತ್ತದೆ ಎಂದು ಹೇಳಿದರು.
ಮಹಿಳೆಯರಲ್ಲಿ ಸಾಧಿಸುವ ಹಂಬಲ ಹೆಚ್ಚಾಗಿದ್ದರೂ, ತಮ ಮನೆ ಮತ್ತು ಕುಟುಂಬದ ಪರಿಸ್ಥಿತಿಗೆ ಸರಿಹೊಂದುವಂತಹ ಕೆಲಸಗಳನ್ನು ಮಾತ್ರ ಅವರು ತುಂಬಾ ಯೋಚಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ, ಉದ್ಯೋಗಿಗಳಿಗೆ ನಿಜವಾದ ಫ್ಲೆಕ್ಸಿಬಿಲಿಟಿ ನೀಡುವ ಮತ್ತು ಕೆಲಸದ ಬಗ್ಗೆ ಸ್ಪಷ್ಟ ಮಾಹಿತಿ ಕೊಡುವ ಕಂಪನಿಗಳು ಮಾತ್ರ ಇಂತಹ ಮಹಿಳೆಯರನ್ನು ಕೆಲಸಕ್ಕೆ ಸೆಳೆಯಲು ಮತ್ತು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಫ್ಲೆಕ್ಸಿಬಿಲಿಟಿ ಎಂಬುದು ಈಗ ಕೇವಲ ಒಂದು ಹೆಚ್ಚುವರಿ ಸೌಲಭ್ಯವಲ್ಲ, ಅದು ವೃತ್ತಿಜೀವನದ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಮಹಿಳೆಯರು ತಮ ಕೆಲಸದ ಅವಕಾಶಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಫ್ಲೆಕ್ಸಿಬಿಲಿಟಿ ಎಂಬುದು ಪ್ರಮುಖ ನಿರ್ಣಾಯಕ ಅಂಶವಾಗಿದೆ ಎಂದು ಈ ಸಮೀಕ್ಷೆಯಿಂದ ತಿಳಿದುಬಂದಿದೆ.
ಕೆಲಸವನ್ನು ಆಯ್ಕೆ ಮಾಡುವಾಗ ಶೇ.53ರಷ್ಟು ಮಹಿಳೆಯರು ಫ್ಲೆಕ್ಸಿಬಲ್ ಕೆಲಸದ ಸಮಯಕ್ಕೆ ಮೊದಲ ಆದ್ಯತೆ ನೀಡಿದರೆ, 48% ಮಹಿಳೆಯರು ಹೈಬ್ರಿಡ್ ಅಥವಾ ವರ್ಕ್ ಫ್ರಮ್ ಹೋಮ್ ಕೆಲಸಕ್ಕೆ ಆದ್ಯತೆ ನೀಡಿದ್ದಾರೆ. ಈ ಬದಲಾವಣೆಯು ಅವರ ಸಂಬಳದ ಆಯ್ಕೆಯ ಮೇಲೆಯೂ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.
