ಬೆಂಗಳೂರು, ಮೇ 25- ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಮುಗಿಯುತ್ತಾ ಬಂದಿದ್ದು, ಜೂ.1 ರಿಂದ ಮರುಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯದ ದೇವಾಲಯಗಳ ಭಕ್ತರ ಭೇಟಿ ಸಂಖ್ಯೆ ಹೆಚ್ಚಿದೆ.
ವಿಶೇಷವಾಗಿ ಶೃಂಗೇರಿ, ಹೊರನಾಡು, ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹಣ್ಯ, ಮುರುಡೇಶ್ವರ ಸೇರಿದಂತೆ ಮತ್ತಿತರ ದೇವಾಲಯಗಳಿಗೆ ಭಕ್ತರ ದಂಡೇ ಹರಿದುಬರುತ್ತಿದೆ. ನಿನ್ನೆ ವೀಕೆಂಡ್ ಹಿನ್ನೆಲೆಯಲ್ಲಿ ದೇವಾಲಯಗಳು ತುಂಬಿ ತುಳುಕುತ್ತಿದ್ದವು.
ಧರ್ಮಸ್ಥಳ, ಕುಕ್ಕೆ ಸುಬ್ರಹಣ್ಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ನಿನ್ನೆ ಒಂದೇ ದಿನ ಸುಬ್ರಹಣ್ಯಕ್ಕೆ 40 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರು.ಹೊಸದಾಗಿ ಶಾಲೆಗೆ ಸೇರುವ ಮಕ್ಕಳಿಗಾಗಿ ಶೃಂಗೇರಿಯಲ್ಲಿ ಅಕ್ಷರಾಭ್ಯಾಸಕ್ಕಾಗಿ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿದ್ದ ದೃಶ್ಯಗಳು ಕಂಡುಬಂದವು.
ಮಕ್ಕಳ ವಿದ್ಯಾಭ್ಯಾಸ ಯಾವುದೇ ತೊಂದರೆಗಳಾಗದಂತೆ ನಿರ್ವಿಘ್ನವಾಗಿ ಮುಂದುವರೆಯಲಿ, ಉತ್ತಮ ಅಂಕ ಗಳಿಸಲೆಂದು ವಿಘ್ನ ನಿವಾರಕ ಸೌತಡ್ಕ ಗಣಪತಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿದರು.
ದೇವಾಲಯದ ವಸತಿನಿಲಯಗಳು, ಖಾಸಗಿ ಹೋಟೆಲ್‌ಗಳು, ರೂಂಗಳು ಭರ್ತಿಯಾಗಿದ್ದು, ಜೂನ್ 1 ರವರೆಗೂ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ನಿರೀಕ್ಷೆಯಿದೆ.
ಜೊತೆಗೆ ಪ್ರವಾಸಿತಾಣಗಳಿಗೂ ಸಹ ಭೇಟಿ ನೀಡುತ್ತಿದ್ದು, ಚಿಕ್ಕಮಗಳೂರು, ಮಡಕೇರಿ, ಕುಶಾಲನಗರ, ಊಟಿ ಸೇರಿದಂತೆ ಮತ್ತಿತರ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡಬಂದಿತು.
ಶಾಲಾ-ಕಾಲೇಜುಗಳು ಪ್ರಾರಂಭವಾದರೆ ದೇವಾಲಯಳಿಗಾಗಿ ಪ್ರವಾಸಕ್ಕೆ ತೆರಳಲು ಆಗುವುದಿಲ್ಲ ಎಂದು ಜನರು ಈ ತಿಂಗಳ ವಾರಾಂತ್ಯದಲ್ಲಿ ಪ್ಲ್ಯಾನ್ ಮಾಡಿಕೊಂಡಿದ್ದು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
