ಬೇಲೂರು,ಮೇ 25-ಕಾಫಿತೋಟದ ರಕ್ಷಣೆಗೆಂದು ಅಳವಡಿಸಿದ್ದ ಸೋಲಾರ್ ವಿದ್ಯುತ್ ತಂತಿಬೇಲಿಯನ್ನು ದಾಟುವ ಉದ್ದೇಶದಿಂದ ಕಾಡಾನೆಗಳ ಹಿಂಡು ತಂತಿ ಬೇಲಿ ಮೇಲೆ ಕಾಫಿ ಗಿಡಗಳನ್ನು ಹಾಕಿ, ಪಕ್ಕದ ತೋಟದೊಳಕ್ಕೆ ಹೋಗಿರುವ ಘಟನೆ ತಾಲೂಕಿನ ಹೊಸಮನೆ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಮಲೆನಾಡು ಭಾಗದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟು ಬೆಳೆ ನಾಶ ಪಡಿಸುತ್ತಿರುವುದು ಹಾಗೂ ಮನುಷ್ಯರ ಮೇಲೆ ದಾಳಿ ಮಾಡುವುದನ್ನುಕಾಣುತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದ ಹೊಸಮನೆ ಗ್ರಾಮದಲ್ಲಿ ಶ್ರೀನಿವಾಸ್ ಎಂಬುವವರಿಗೆ ಸೇರಿದ ತೋಟದಲ್ಲಿ ಐದು ಕಾಡಾನೆಗಳ ಗುಂಪು ಕಾಣಿಸಿಕೊಂಡಿದ್ದವು.
ಕೆಲ ಸಮಯದ ನಂತರ ಪಕ್ಕದ ತೋಟಕ್ಕೆ ತೆರಳಲು ಮುಂದಾದ ಆನೆಗಳು ಸೋಲಾರ್ ಬೇಲಿಯನ್ನು ದಾಟಲು ಚಾಣಾಕ್ಷತನದಿಂದ ತೋಟದಲ್ಲಿ ಬೆಳೆದಿದ್ದ ಐವತ್ತಕ್ಕೂ ಹೆಚ್ಚು ಕಾಫಿ ಗಿಡಗಳು ಸೇರಿದಂತೆ ಇತರೆ ಸಣ್ಣ ಮರಗಿಡಗಳನ್ನು ಕಿತ್ತು ಸೋಲಾರ್ ವಿದ್ಯುತ್ ತಂತಿಯ ಬೇಲಿ ಮೇಲೆ ಹಾಕಿ ನಂತರ ಬೇಲಿದಾಟಿ ಪಕ್ಕದ ತೋಟಕ್ಕೆ ಸಾಗಿವೆ.
ಕಾಡಾನೆಗಳು ಬೇಲಿ ದಾಟುವ ದೃಶ್ಯವನ್ನು ಕಣ್ಣಾರೆ ಕಂಡ ರೈತರು ಘಟನೆಯಿಂದ ಆತಂಕ್ಕೀಡಾಗಿದ್ದಾರೆ. ಕಾಡಾನೆಗಳ ಬುದ್ಧಿವಂತಿಕೆಯ ನಡೆ ಇದೀಗ ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಈ ಘಟನೆಯಿಂದ ಆತಂಕಿತರಾದ ಗ್ರಾಮಸ್ಥರು ನಾಯಿಯೊಂದಿಗೆ ಕಾಡಾನೆಗಳನ್ನು ಓಡಿಸಲು ಮುಂದಾಗಿದ್ದಾರೆ. ಆದರೆ ನಾಯಿಯನ್ನು ನೋಡಿದ ಕಾಡಾನೆಯೊಂದು ಆಕ್ರೋಶದಿಂದ ನಾಯಿಯ ಜತೆಗೆ ಮನುಷ್ಯರನ್ನೂಅಟ್ಟಾಡಿಸಿದ್ದು, ಅದೃಷ್ಟವಶಾತ್ ಸೋಲಾರ್ ಬೇಲಿಯ ರಕ್ಷಣೆಯಿಂದ ದೊಡ್ಡ ಅಪಾಯ ತಪ್ಪಿದಂತಾಗಿದೆ.
ಈ ಘಟನೆಗಳನ್ನು ದೂರದಲ್ಲಿದ್ದ ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾಡಾನೆಗಳ ಉಪಟಳದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಓಡಿಸಿದ್ದರಿಂದ ಗ್ರಾಮಸ್ಥರು ನೆಮದಿಯ ನಿಟ್ಟುಸಿರು ಬಿಡುವಂತ್ತಾಗಿದೆ.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅರೇಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ತೋಟ, ಗದ್ದೆಗಳಿಗೆ ತೆರಳಲು ಭಯ ಪಡುತಿದ್ದು, ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರಕ್ಕೆ ಮುಂದಾಗುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
