Homeರಾಜ್ಯನಿತಿನ್‌ ನಬೀನ್‌ ಆಗಮನದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ತೀವ್ರಗೊಂಡ ನಾಯಕತ್ವ ವಿಚಾರ ಕುರಿತು ಚರ್ಚೆ

ನಿತಿನ್‌ ನಬೀನ್‌ ಆಗಮನದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ತೀವ್ರಗೊಂಡ ನಾಯಕತ್ವ ವಿಚಾರ ಕುರಿತು ಚರ್ಚೆ

Discussions on leadership issues intensified in the state BJP

ಬೆಂಗಳೂರು, ಮೇ 25- 2028ರ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ವಿಚಾರ ಕುರಿತು ಚರ್ಚೆಗಳು ತೀವ್ರಗೊಂಡಿವೆ. ನಿತಿನ್‌ ನಬೀನ್‌ ಅವರು ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿ ಪಕ್ಷದ ಪ್ರಮುಖರ ಜೊತೆ ಸರಣಿ ಸಭೆ ನಡೆಸಿರುವುದು ಕಾರ್ಯಕರ್ತರಲ್ಲಿ ಹೊಸ ಹುಮಸ್ಸು ಮೂಡಿಸಿದೆ.

ಮುಖ್ಯವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರು ಕೇಳಿಬರುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌‍. ಯಡಿಯೂರಪ್ಪ ಅವರ ಪುತ್ರರಾಗಿರುವ ವಿಜಯೇಂದ್ರ ಅವರ ಅವಧಿ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದ್ದು, ಅವರ ಮುಂದಿನ ಭವಿಷ್ಯದ ಬಗ್ಗೆ ಪಕ್ಷದೊಳಗೆ ಚರ್ಚೆಗಳು ಗರಿಗೆದರಿವೆ. ಲಿಂಗಾಯತ ಸಮುದಾಯದಲ್ಲಿ ವಿಜಯೇಂದ್ರ ಅವರಿಗೆ ಬಲವಾದ ಬೆಂಬಲವಿದೆ. ವಿಜಯೇಂದ್ರ ಕೇವಲ ನಾಯಕರಲ್ಲ, ಲಿಂಗಾಯತ ಸಮುದಾಯದ ಆಶಯಗಳ ಪ್ರತೀಕ ಎಂಬ ಅಭಿಪ್ರಾಯ ಪಕ್ಷದೊಳಗೆ ಕೇಳಿಬರುತ್ತಿದೆ.

ಬಿಜೆಪಿ ನಿರ್ಮಾಣದಲ್ಲಿ ಯಡಿಯೂರಪ್ಪ ಅವರ ಪಾತ್ರವನ್ನು ಗಮನಿಸಿದರೆ, ಅವರ ಕುಟುಂಬವನ್ನು ಕಡೆಗಣಿಸುವುದು ಸುಲಭವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.ಪಕ್ಷದಲ್ಲಿರುವ ಅಸಂಖ್ಯಾತ ಯಡಿಯೂರಪ್ಪನವರ ನಿಷ್ಠಾವಂತರಿಗೆ, ಅವರ ಮಗನನ್ನು ಇಷ್ಟು ಬೇಗ ನಾಯಕತ್ವದಿಂದ ಕೆಳಗಿಳಿಸುವುದು ತೀವ್ರವಾದ ಅಸಮಾಧಾನ ಮತ್ತು ದ್ರೋಹದ ಭಾವನೆಯನ್ನು ಉಂಟುಮಾಡುತ್ತದೆ.

ಇತ್ತೀಚೆಗೆ ನಡೆದ ಯಡಿಯೂರಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಗವಹಿಸಿದ್ದನ್ನು ಕೂಡ ಮೋದಿ-ಶಾ ನಾಯಕತ್ವವು ಯಡಿಯೂರಪ್ಪ ಕುಟುಂಬದ ಮೇಲೆ ವಿಶ್ವಾಸ ಇಟ್ಟಿದೆ ಎಂಬ ಸಂದೇಶವಾಗಿ ವಿಶ್ಲೇಷಿಸಲಾಗುತ್ತಿದೆ. ನಿತಿನ್‌ ನಬೀನ್‌, ಯಡಿಯೂರಪ್ಪ ಹಾಗೂ ವಿಜಯೇಂದ್ರ ಒಟ್ಟಿಗೆ ಭಾಗವಹಿಸಿದ್ದ ಬಿಜೆಪಿ ಕೋರ್‌ ಕಮಿಟಿ ಸಭೆಗೂ ವಿಶೇಷ ಮಹತ್ವ ಸಿಕ್ಕಿದೆ.

ಆದರೆ, ಪಕ್ಷದೊಳಗಿನ ಕೆಲ ನಾಯಕರು ವಿಜಯೇಂದ್ರ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್‌‍ ನಾಯಕರೊಂದಿಗೆ ಸ್ನೇಹಪರ ಸಂಬಂಧ ಇಟ್ಟುಕೊಂಡಿದ್ದಾರೆ. ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಈ ಅಸಮಾಧಾನದ ಧ್ವನಿ ದೆಹಲಿಗೂ ತಲುಪಿದೆ ಎನ್ನಲಾಗುತ್ತಿದೆ.

ವಿಜಯೇಂದ್ರ ಅವರನ್ನು ಬದಲಿಸುವ ವಿಚಾರದಲ್ಲೂ ಹಲವು ಹೆಸರುಗಳು ಚರ್ಚೆಗೆ ಬರುತ್ತಿವೆ. ಪ್ರಹ್ಲಾದ್‌ ಜೋಶಿ, ಬಿ.ಎಲ್‌. ಸಂತೋಷ್‌ ಹೆಸರುಗಳು ಕೇಳಿಬಂದರೂ ಸಮುದಾಯದ ಸಮೀಕರಣದ ಕಾರಣದಿಂದ ಈ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ವಿ. ಸೋಮಣ್ಣ, ಜಗದೀಶ ಶೆಟ್ಟರ್‌, ಬಸವರಾಜ ಬೊಮಾಯಿ ಹಾಗೂ ಅರವಿಂದ ಬೆಲ್ಲದ್‌ ಹೆಸರುಗಳೂ ಚರ್ಚೆಯಲ್ಲಿವೆ. ಆದರೆ, ಯಡಿಯೂರಪ್ಪ ಕುಟುಂಬದಷ್ಟು ಭಾವನಾತಕ ಹಾಗೂ ಮತದಾರರ ಸಂಪರ್ಕ ಇನ್ಯಾರಿಗೂ ಇಲ್ಲ ಎನ್ನುವುದು ಪಕ್ಷದ ಒಂದು ವಲಯದ ಅಭಿಪ್ರಾಯವಾಗಿದೆ.

2028ರ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಯನ್ನೂ ಬಿಜೆಪಿ ನಾಯಕತ್ವ ಗಂಭೀರವಾಗಿ ಪರಿಗಣಿಸುತ್ತಿದೆ. ಜೆಡಿಎಸ್‌‍ ಬಳಿ ಈಗಾಗಲೇ ಹೆಚ್‌.ಡಿ. ಕುಮಾರಸ್ವಾಮಿ ಎಂಬ ಸಿಎಂ ಮುಖವಿದೆ. ಹೀಗಾಗಿ ಬಿಜೆಪಿ ಕೂಡ ಮುಂದಿನ ಚುನಾವಣೆಗೆ ಸ್ಪಷ್ಟ ನಾಯಕತ್ವ ತಂತ್ರ ರೂಪಿಸಲು ಸಜ್ಜಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕುರಿತು ಅಂತಿಮ ನಿರ್ಧಾರ ನವೆಂಬರ್‌ ವೇಳೆಗೆ ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹಲವು ಸೂಚನೆ ನೀಡಿದ ಅಧ್ಯಕ್ಷರು :
ತಮ ಮೊದಲ ಭೇಟಿಯ ವೇಳೆ ಬಿಜೆಪಿಯ ಸಂಘಟನಾತಕ ಚಟುವಟಿಕೆಗಳಿಗೆ ಹೆಚ್ಚಿನ ವೇಗ ನೀಡಿದೆ. ತಳಮಟ್ಟದಿಂದ ಪಕ್ಷವನ್ನು ಬಲಪಡಿಸಲು ಅವರು ನಿರ್ದೇಶನ ನೀಡಿದ್ದಾರೆ.
ಈ ಭೇಟಿಯು ಸ್ಥಳೀಯ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹವನ್ನು ಮೂಡಿಸಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಇದು ಪ್ರೇರಣೆಯಾಗಿದೆ. ಪಕ್ಷದ ಮೌಲ್ಯಗಳನ್ನು ಕಾಪಾಡಿಕೊಂಡು, ಶಿಸ್ತಿನಿಂದ ಕೆಲಸ ಮಾಡುವಂತೆ ಮತ್ತು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಭೇಟಿ ಹೊಸ ಶಕ್ತಿಯನ್ನು ತುಂಬಿದೆ ಎಂದು ಪಕ್ಷದ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಬಲಪಡಿಸುವುದು, ಆಂತರಿಕ ಭಿನ್ನಮತಗಳನ್ನು ನಿವಾರಿಸುವುದು ಮತ್ತು ಕಾರ್ಯಕರ್ತರಿಗೆ ಒಗ್ಗಟ್ಟಿನ ಮಂತ್ರ ಬೋಧಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ಪಕ್ಷದ ತಳಮಟ್ಟದ ಸಂಘಟನೆಯನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸಂಪರ್ಕವನ್ನು ಹೆಚ್ಚಿಸಲು ಅವರು ಕಠಿಣ ನಿರ್ದೇಶನಗಳನ್ನು ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿನ ಯಶಸ್ಸಿನ ನಂತರ, ಬಿಜೆಪಿ ಹೈಕಮಾಂಡ್‌ ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದತ್ತ ಹೆಚ್ಚಿನ ಗಮನಹರಿಸಿದ್ದು, ಈ ಭೇಟಿಯನ್ನು ರಾಜ್ಯದಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಹೊಸ ಆಯಾಮ ನೀಡುವ ಪ್ರಯತ್ನವೆಂದು ನೋಡಲಾಗುತ್ತಿದೆ. ನಿತಿನ್‌ ನಬೀನ್‌ ಅವರ ಈ ಭೇಟಿಯು ರಾಜ್ಯ ಬಿಜೆಪಿ ನಾಯಕತ್ವಕ್ಕೆ ಮತ್ತು ಕಾರ್ಯಕರ್ತರಿಗೆ ಹೊಸ ಚೈತನ್ಯವನ್ನು ನೀಡಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯುವ ಸಾಧ್ಯತೆಯಿದೆ.

RELATED ARTICLES

Latest News