ಬೆಂಗಳೂರು, ಮೇ 25- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ಕೇವಲ ಹತ್ತು ದಿನಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದೆ.
ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಕೇಂದ್ರಸರ್ಕಾರ ಹೆಚ್ಚಳ ಮಾಡಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಹೀಗಾಗಿ ಹೆಚ್ಚಳ ಮಾಡಿರುವ ತೈಲ ಬೆಲೆಯನ್ನು ಕಡಿಮೆ ಮಾಡಬೇಕೆಂದು ರಾಜ್ಯ ಸರ್ಕಾರ ಒತ್ತಾಯಿಸುತ್ತಿದೆ.
ವಾಸ್ತವವಾಗಿ ದೇಶದಲ್ಲೇ ಅತೀ ಹೆಚ್ಚಿನ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡುತ್ತಿರುವ ನಾಲ್ಕನೇ ರಾಜ್ಯವೆಂದರೆ ಕರ್ನಾಟಕ.ಮಧ್ಯಪ್ರದೇಶ, ಕೇರಳಂ, ಮಹಾರಾಷ್ಟ್ರ ನಂತರ ಅತೀ ಹೆಚ್ಚಿನ ದುಬಾರಿ ಬೆಲೆಯಲ್ಲಿ ತೈಲ ಇಂಧನ ಮಾರಾಟವಾಗುತ್ತಿರುವುದೇ ಕರ್ನಾಟಕದಲ್ಲಿ.ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 108.41 ರೂ. ಹಾಗೂ ಡೀಸೆಲ್ ಲೀಟರ್‌ಗೆ 96.34 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಹೆಚ್ಚಿನ ಮಾರಾಟ ತೆರಿಗೆ :
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ದೇಶದಲ್ಲೇ ಅತೀ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ವಿಧಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ.
ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಗೆ (ಪ್ರತೀ ಒಂದು ಲೀಟರ್‌ಗೆ) ಶೇ.29.84 ಹಾಗೂ ಡೀಸೆಲ್ ಮೇಲಿನ ತೆರಿಗೆ ಮಾರಾಟವನ್ನು ಶೇ.18.44 ವಿಧಿಸಲಾಗುತ್ತದೆ.
ಉದಾಹರಣೆಗೆ ಒಂದು ಲೀ. ಪೆಟ್ರೋಲ್ ಬೆಲೆ 100 ರೂ. ಇದ್ದರೆ ರಾಜ್ಯಸರ್ಕಾರದ ಬೊಕ್ಕಸಕ್ಕೆ 29 ರೂ. 84 ಪೈ. ಪಾವತಿಯಾಗುತ್ತದೆ.
ಅದೇ ರೀತಿ ಡೀಸೆಲ್ ದರ ಪ್ರತೀ ಲೀ.ಗೆ 100 ರೂ. ಇದ್ದರೆ ಮಾರಾಟದ ಮೇಲಿನ ತೆರಿಗೆಯಾಗಿ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ 18.44 ರೂ. ಸಂದಾಯವಾಗುತ್ತದೆ.ದೇಶದಲ್ಲಿ ಯಾವ ರಾಜ್ಯಗಳೂ ಕೂಡಾ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾರಾಟ ತೆರಿಗೆಯನ್ನು ವಿಧಿಸುತ್ತಿಲ್ಲ. ಕರ್ನಾಟಕದ ತೆರಿಗೆ ವ್ಯವಸ್ಥೆಯು ಶೇಕಡಾವಾರು ಆಧರಿತವಾಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾದಾಗ ಅಥವಾ ಕಂಪನಿಗಳು ಚಿಲ್ಲರೆ ಮಾರಾಟದ ಬೆಲೆಯನ್ನು ಹೆಚ್ಚಿಸಿದಾಗ ರಾಜ್ಯಸರ್ಕಾರದ ಆದಾಯವು ಹೆಚ್ಚಾಗುತ್ತದೆ.
ಪ್ರತೀವರ್ಷ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಮಾರಾಟ ತೆರಿಗೆ ವಿಧಿಸುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ವರಮಾನ ಬರುತ್ತದೆ.
ಇಳಿಕೆ ಮಾಡಲು ಒತ್ತಾಯ :
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಳ ಮಾಡಿದೆ ಎಂದು ಆರೋಪ ಮಾಡುವ ರಾಜ್ಯಸರ್ಕಾರ ಮೊದಲು ತನ್ನ ವ್ಯಾಪ್ತಿಯಲ್ಲಿ ಬರುವ ಮಾರಾಟದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದರೆ ಗ್ರಾಹಕರಿಗೆ ಹೊರೆಯಾಗುವುದು ತಪ್ಪಲಿದೆ ಎಂಬುದು ಬಹುತೇಕರ ಒತ್ತಾಯವಾಗಿದೆ.
ತೆರಿಗೆ ಮಾರಾಟವನ್ನು ನಾವು ಕಡಿಮೆ ಮಾಡಿದ್ದೇವೆ. ಕೇಂದ್ರ ಸರ್ಕಾರವು ಇದೇ ರೀತಿ ತೈಲ ಬೆಲೆಗಳ ಬೆಲೆಯನ್ನು ಇಳಿಕೆ ಮಾಡಲಿ ಎಂದು ಕಾಂಗ್ರೆಸ್ ನಾಯಕರು ಹೇಳಿದರೆ ಅದಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ.
ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯದಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಮಾರಾಟದ ಮೇಲಿನ ತೆರಿಗೆಯನ್ನು ಇಳಿಕೆ ಮಾಡುತ್ತದೆ. ಉದಾಹರಣೆಗೆ ದೆಹಲಿ, ಗುಜರಾತ್, ಉ.ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಾರಾಟದ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀ. ಪೆಟ್ರೋಲ್‌ಗೆ 99.51 ರೂ., ಗುಜರಾತ್‌ನಲ್ಲಿ 99.23 ರೂ., ಉ.ಪ್ರದೇಶದಲ್ಲಿ 99.20 ರೂ., ಹರಿಯಾಣದಲ್ಲಿ 100.70 ರೂ. ಗಳಿಗೆ ಮಾರಾಟವಾಗುತ್ತಿದೆ.
ಇದಕ್ಕೆ ವ್ಯತಿರಿಕ್ತವೆಂಬಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ತೆಲಂಗಾಣದಲ್ಲಿ 114.27 ರೂ., ಕೇರಳಂನಲ್ಲಿ 111.63, ಕರ್ನಾಟಕದಲ್ಲಿ 108.41 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಸಾಗಾಣಿಕೆ ವೆಚ್ಚ :
ಡೀಸೆಲ್ ಮತ್ತು ಪೆಟ್ರೋಲ್ ಅನ್ನು ದೂರದೂರಿನಿಂದ ಸಾಗಾಣಿಕೆ ಮಾಡಬೇಕಾಗಿರುವುದರಿಂದ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿದ್ದೇವೆ ಎಂದು ರಾಜ್ಯಸರ್ಕಾರ ಹೇಳಿಕೊಳ್ಳುತ್ತಿದೆ.
ಮೊದಲೇ ಅಗತ್ಯ ವಸ್ತುಗಳ ಬೆಲೆಯಿಂದ ಶ್ರೀಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯಸರ್ಕಾರ ತನ್ನ ಪ್ರತಿಷ್ಟೆಯನ್ನು ಬದಿಗಿಟ್ಟು ಮಾರಾಟ ತೆರಿಗೆಯನ್ನು ಕಡಿಮೆ ಮಾಡಲಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ರಾಜ್ಯ ಪೆಟ್ರೋಲ್, ಡೀಸೆಲ್ ದರ :
ಆಂಧ್ರಪ್ರದೇಶ – 114.23 ರೂ., 101.97ರೂ.
ಅರುಣಾಚಲ ಪ್ರದೇಶ – 97.19ರೂ., 86.62 ರೂ.
ಅಸ್ಸಾಂ – 100.94 ರೂ., 95.25 ರೂ.
ಬಿಹಾರ್ – 112.18 ರೂ., 98.24 ರೂ.
ಚಂಡೀಗಡ – 98.95 ರೂ., 86.94 ರೂ.
ದೆಹಲಿ – 99.51 ರೂ., 92.49 ರೂ.
ಗುಜರಾತ್ – 99.23 ರೂ., 95.13 ರೂ.
ಹರಿಯಾಣ – 100.72 ರೂ., 93.24 ರೂ.
ಹಿಮಾಚಲ ಪ್ರದೇಶ – 98.69 ರೂ., 90.68 ರೂ.
ಜಾರ್ಖಂಡ್ – 103.28 ರೂ., 98.23 ರೂ.
ಕರ್ನಾಟಕ – 108.41 ರೂ., 96.34 ರೂ.
ಕೇರಳಂ – 111.63 ರೂ., 100.48 ರೂ.
ಮಧ್ಯಪ್ರದೇಶ – 113.17 ರೂ., 98.22 ರೂ.
ಮಹಾರಾಷ್ಟ್ರ – 109.08 ರೂ., 95.69 ರೂ.
ಮಣಿಪುರ – 104.35 ರೂ., 90.14 ರೂ.
ಮೇಘಾಲಯ – 99.69 ರೂ., 91.33 ರೂ.
ಕಡಿಮೆ ದರದಲ್ಲಿ ಡೀಸೆಲ್ ಮಾರಾಟ :
ದೆಹಲಿ – 99.51 ರೂ.
ಗುಜರಾತ್ – 99.23 ರೂ.
ಉತ್ತರಪ್ರದೇಶ – 99.20 ರೂ.
ಹರಿಯಾಣ – 100.72 ರೂ.
ಅತೀ ಹೆಚ್ಚು ದರದಲ್ಲಿ ಮಾರಾಟ :
ತೆಲಂಗಾಣ – 114.27 ರೂ.
ಕೇರಳಂ – 111.63 ರೂ.
ಕರ್ನಾಟಕ 108.41 ರೂ.
