Homeರಾಜ್ಯಕುರ್ಚಿ ಕಿತ್ತಾಟಕ್ಕೆ ಕೊನೆಗೂ ತೆರೆ, ಹೈಕಮಾಂಡ್ ಆಜ್ಞೆಗೆ ತಲೆಬಾಗಿದ ಸಿದ್ದರಾಮಯ್ಯ

ಕುರ್ಚಿ ಕಿತ್ತಾಟಕ್ಕೆ ಕೊನೆಗೂ ತೆರೆ, ಹೈಕಮಾಂಡ್ ಆಜ್ಞೆಗೆ ತಲೆಬಾಗಿದ ಸಿದ್ದರಾಮಯ್ಯ

Siddaramaiah bows to the high command's orders

ಬೆಂಗಳೂರು, ಮೇ 28- ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಬದಲಾವಣೆ ವಿಚಾರವಾಗಿ ಕಾಂಗ್ರೆಸ್‌‍ ನಾಯಕರು ಹಿಂದೆಂದೂ ಇಲ್ಲದಷ್ಟು ಗೌಪ್ಯತೆ ಕಾಪಾಡಿಕೊಳ್ಳುವ ಮೂಲಕ ಶಿಸ್ತು ಪಾಲನೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಹಲವಾರು ತಿಂಗಳಿನಿಂದಲೂ ಅಧಿಕಾರ ಹಂಚಿಕೆ ಎಂಬ ಚರ್ಚೆ ಕಾಂಗ್ರೆಸ್‌‍ ಆವರಣದಲ್ಲಿ ಮಾರೀಚ ಜಿಂಕೆಯಂತೆ ಸುಳಿದಾಡಿದೆ. ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾಗಿದೆ ಎಂದು ಕೆಲವೊಮೆ ಹೇಳಿದರೆ, ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಕೆಲವರು ಖಡಾಖಂಡಿತವಾಗಿ ದಾರ್ಷ್ಯದ ಹೇಳಿಕೆಗಳನ್ನು ನೀಡುತ್ತಿದ್ದರು.

ಸಿದ್ದರಾಮಯ್ಯ ಅವರು, ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುತ್ತೇನೆ ಎನ್ನುವ ಮಾತುಗಳನ್ನೇ ನೂರಾರು ಬಾರಿ ಪುನರುಚ್ಚರಿಸಿದ್ದರು. ಯಾವುದೇ ಗುಟ್ಟು ಬಿಟ್ಟುಕೊಡದೇ ಕೊನೆಯವರೆಗೂ ರಹಸ್ಯ ಕಾಯ್ದುಕೊಂಡರು.

ನಿನ್ನೆ ಜವಾಹಾರ್‌ಲಾಲ್‌ ನೆಹರೂ ಅವರ ಪುಣ್ಯಸರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೂ ಸಿದ್ದರಾಮಯ್ಯ ಯಾವುದೇ ಮಾತನಾಡದೇ ನಿಮ ಮನಸ್ಸಿಗೆ ತೋಚಿದಂತೆ ಬರೆದುಕೊಳ್ಳಿ ಎಂದು ತಮ್ಮ ಪಾಡಿಗೆ ತಾವು ಹೋಗಿದ್ದರು.

ಡಿ.ಕೆ.ಶಿವಕುಮಾರ್‌ ಕೂಡ ಒಮ್ಮೆ ಮಾತ್ರ ಬಾಯಿ ತಪ್ಪಿ ಸಿದ್ದರಾಮಯ್ಯ ಅವರನ್ನೊಳಗೊಂಡಂತೆ ನಾಲ್ಕೈದು ಜನರ ನಡುವೆ ಗುಟ್ಟಿನ ವ್ಯಾಪಾರವಾಗಿದೆ ಎಂದು ಹೇಳಿದ್ದರು. ಅನಂತರ ತಾವು ಯಾವುದೇ ಹೇಳಿಕೆ ನೀಡದೆ, ಕೈಸನ್ನೆ, ಬಾಯಿಸನ್ನೆಯಲ್ಲೇ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದರು. ಬೇರೆಯವರಿಗೂ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಲು ಅವಕಾಶ ನೀಡದೆ ಶಿಸ್ತಿನ ಅಧ್ಯಕ್ಷರಾಗಿ ವರ್ತಿಸಿದರು.

ದೆಹಲಿಯ ಭೇಟಿ ಬಳಿಕವಂತೂ ಕುತೂಹಲ ಕುಲುಮೆಯಂತೆ ಕುದಿಯುತ್ತಿತ್ತು. ಯಾವ ಮಾದರಿಯ ಪ್ರಶ್ನೆಗಳು ಎದುರಾದರೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಒಳಗೊಂಡಂತೆ ಯಾರೂ ತಮ ಹೇಳಿಕೆಗಳನ್ನು ಬದಲಿಸಲಿಲ್ಲ.

ನಿನ್ನೆ ಹಿರಿಯ ಶಾಸಕರಾದ ಆರ್‌.ವಿ.ದೇಶಪಾಂಡೆ ಮತ್ತು ಸರ್ಕಾರದ ಮುಖ್ಯ ಸಚೇತಕ ಪಿ.ಎಂ.ಅಶೋಕ್‌ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡುತ್ತಾರೆ ಎಂದು ಉತ್ಸಾಹದಲ್ಲಿ ಬಾಯಿಬಿಟ್ಟಿದ್ದರು. ಅದನ್ನು ಹೊರತು ಪಡಿಸಿದರೆ, ಉಳಿದಂತೆ ಯಾರೂ ಗುಟ್ಟು ಬಿಟ್ಟುಕೊಡಲಿಲ್ಲ.

ನಿನ್ನೆ ದೆಹಲಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೇವಾಲ, ನಾಯಕತ್ವದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಕಾಂಗ್ರೆಸ್‌‍ ಪಕ್ಷದಿಂದ ಶಾಸಕಾಂಗ ಸಭೆಯನ್ನೂ ಕರೆದಿಲ್ಲ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಎಲ್ಲವೂ ಕೇವಲ ವದಂತಿ ಎಂದಿದ್ದರು.
ದೆಹಲಿಯ ಸಭೆಯಲ್ಲಿ ರಾಜ್ಯಸಭೆ ಮತ್ತು ವಿಧಾನಪರಿಷತ್ತಿನ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತ್ರ ಚರ್ಚೆಯಾಗಿದೆ. ನಾಯಕತ್ವ ಕುರಿತಂತೆ ಕಾಂಗ್ರೆಸ್‌‍ ಹೈಕಮಾಂಡ್‌ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೊಂದಿದೆ ಎಂದು ಹೇಳಿದ್ದರು.

ಇಂದು ಬೆಳಿಗ್ಗೆ ಕೊನೆಯ ಕ್ಷಣದವರೆಗೂ ಎಲ್ಲರೂ ಹಳೆಯ ಗ್ರಾಮಾ ಫೋನ್‌ನಂತೆ ಹೇಳಿದ್ದನ್ನೇ ಹೇಳಿ ನುಣುಚಿಕೊಳ್ಳುತ್ತಿದ್ದರು. ರಾಜ್ಯಸಭೆ ಮತ್ತು ವಿಧಾನಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಮಾತ್ರ ದೆಹಲಿಯಲ್ಲಿ ಸಭೆ ನಡೆದಿದೆ ಎಂದು ಹೇಳುತ್ತಾ ಬಂದಿದ್ದಾರೆ. ಉಪಾಹಾರ ಕೂಟದ ಬಳಿಕ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ ಎಂಬುವುದು ಸ್ಪಷ್ಟವಾಗಿದ್ದರೂ ಕೊನೆ ಕ್ಷಣದವರೆಗೂ ಯಾರೂ ಅದನ್ನು ಖಚಿತಪಡಿಸಲಿಲ್ಲ.

ಆತಂಕದಲ್ಲಿ ಹೈಕಮಾಂಡ್‌:
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದೇ ರೀತಿಯ ಗೊಂದಲ ಉಂಟಾಗಿತ್ತು. ವಯಸ್ಸಿನ ಕಾರಣಕ್ಕಾಗಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾಗ ಭಾರೀ ಪ್ರಮಾಣದ ಚರ್ಚೆಗಳು ನಡೆದವು. ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಕೆಲವು ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದರು. ಆದರೆ ರಾಜೀನಾಮೆ ನೀಡುವ ಮುನ್ನ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಕಣ್ಣೀರು ಹಾಕಿದ್ದರು. ಯಡಿಯೂರಪ್ಪ ಅವರ ನೋವು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಿತ್ತು.

ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಮುತ್ಸದ್ದಿಗಳ ಪೈಕಿ ಒಬ್ಬರಾಗಿದ್ದಾರೆ. ಅವರಿಗೆ ಗೌರವಯುತ ವಿದಾಯ ನೀಡದೇ ಇದ್ದರೆ ಕಾಂಗ್ರೆಸ್‌‍ಗೆ ಭವಿಷ್ಯದಲ್ಲಿ ಮರ್ಮಾಘಾತವಾಗಲಿದೆ ಎಂಬ ಆತಂಕದಿಂದಲೇ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.

ಯಾವುದೇ ಸಂದರ್ಭದಲ್ಲೂ ಸಿದ್ದರಾಮಯ್ಯ ವಜಾಗೊಂಡರು ಎಂಬ ಸಂದೇಶ ರವಾನೆಯಾಗಬಾರದು, ಬದಲಾಗಿ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದರು ಎಂಬ ಸಂದೇಶ ಬಿಂಬಿತವಾಗಬೇಕೆಂಬುದು ಹೈಕಮಾಂಡ್‌ನ ಇರಾದೆ. ಅದಕ್ಕಾಗಿ ಯಾರೊಬ್ಬರೂ ನಾಯಕತ್ವದ ವಿಚಾರವಾಗಿ ಬಾಯಿಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಒಳಗೊಂಡಂತೆ ಎಲ್ಲರೂ ಖಡ್ಡಾಯವಾಗಿ ಪಾಲನೆ ಮಾಡುತ್ತಿದ್ದಾರೆ.

ನಿನ್ನೆ ಶಾಸಕರಾದ ಆರ್‌.ವಿ.ದೇಶಪಾಂಡೆ ಮತ್ತು ಪಿ.ಎಂ.ಅಶೋಕ್‌ ಅವರು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ ಎಂದು ಬಾಯಿ ತಪ್ಪಿ ಹೇಳಿಕೆ ನೀಡಿದ್ದರು. ಆದರೆ ಸಂಜೆ ಬಳಿಕ ಬೆಂಗಳೂರಿಗೆ ಆಗಮಿಸಿದ ರಣದೀಪ್‌ಸಿಂಗ್‌ ಸುರ್ಜೇವಾಲ ರಾಜಕಾರಣದಲ್ಲಿ ಮತ್ತಷ್ಟು ಗೊಂದಲವನ್ನು ಹುಟ್ಟು ಹಾಕಿತ್ತು.

ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆಯೋ ಎಂಬ ಅನುಮಾನ ಕಾಡಿತ್ತು. ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡುವವರಿಗೂ ಅಧಿಕಾರ ತ್ಯಾಗ ಕೇವಲ ವದಂತಿಯಾಗಿಯೇ ಇತ್ತು. ಈ ಮೂಲಕ ಕಾಂಗ್ರೆಸ್‌‍ ರಹಸ್ಯ ಕಾಪಾಡುವಲ್ಲಿ ಒಮತದ ಹೆಜ್ಜೆ ಹಾಕಿದ್ದು ಕಂಡು ಬರುತ್ತಿದೆ.

RELATED ARTICLES

Latest News