ಬೆಂಗಳೂರು: ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಘೋಷಿಸಿದ್ದಾರೆ. ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಸಾಂವಿಧಾನಿಕ ವಿಧಿ-ವಿಧಾನಗಳ ಮೂಲಕ ಮುಂದಿನ ಕ್ರಮಗಳು ನಡೆಯಲಿದ್ದು, ಶೀಘ್ರದಲ್ಲೇ ರಾಜ್ಯಕ್ಕೆ ನೂತನ ಮುಖ್ಯಮಂತ್ರಿ ದೊರೆಯಲಿದ್ದಾರೆ ಎಂದು ಹೇಳಿದರು.
ರಾಜೀನಾಮೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ನಾಲ್ಕೂವರೆ ದಶಕಗಳ ರಾಜಕೀಯ ಪಯಣ, ಹೋರಾಟ, ತತ್ವನಿಷ್ಠೆ ಹಾಗೂ ಜನಸೇವೆಯ ಬದ್ಧತೆಯನ್ನು ನೆನಪಿಸಿಕೊಂಡರು. “ನಾನು ಒತ್ತಡ ಮತ್ತು ಪ್ರಭಾವಗಳಿಗೆ ತಲೆಬಾಗುವ ವ್ಯಕ್ತಿಯಲ್ಲ. ಈ ರಾಜೀನಾಮೆ ಪತ್ರವನ್ನೂ ಸಂತೋಷದಿಂದ ಮನಪೂರ್ವಕವಾಗಿ ಸಲ್ಲಿಸಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು.
ಗ್ರಾಮೀಣ ರೈತ ಕುಟುಂಬದಿಂದ ಬಂದ ತಾವು ಶಾಸಕ, ಸಚಿವ ಅಥವಾ ಮುಖ್ಯಮಂತ್ರಿ ಆಗುವ ಕನಸನ್ನೂ ಕಂಡಿರಲಿಲ್ಲ ಎಂದು ಹೇಳಿದ ಅವರು, “ಈ ಮಟ್ಟಕ್ಕೆ ನನ್ನನ್ನು ತಂದು ನಿಲ್ಲಿಸಿದ್ದು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ. ಸಂವಿಧಾನದ ಬಲ ಇಲ್ಲದೆ ಇದ್ದರೆ ನಾನು ಎಲ್ಲೋ ಕುರಿ ಮೇಯಿಸುತ್ತಿರುತ್ತಿದ್ದೆ” ಎಂದು ಭಾವುಕರಾದರು.

ಜನತೆ ತಮ್ಮನ್ನು ಎರಡು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ ಬಗ್ಗೆ ಕೃತಜ್ಞತೆ ಸಲ್ಲಿಸಿದ ಅವರು, ಮತದಾರರನ್ನು “ಮತದಾರ ದೇವರು” ಎಂದು ಕರೆದರು. ಕಾಂಗ್ರೆಸ್ ಪಕ್ಷವು ತಮ್ಮ ಸೈದ್ಧಾಂತಿಕ ಹೋರಾಟಕ್ಕೆ ಮಾನ್ಯತೆ ನೀಡಿ ರಾಜಕೀಯ ಅವಕಾಶ ನೀಡಿದೆ ಎಂದು ಹೇಳಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.
“ನಾನು ರಾಜಕಾರಣವನ್ನು ಅಧಿಕಾರ ಅಥವಾ ವ್ಯಾಪಾರದ ಸಾಧನವೆಂದು ನೋಡಿಲ್ಲ. ಅದು ಬಡವರು, ಶೋಷಿತರು ಮತ್ತು ನೊಂದವರಿಗೆ ನೆರವಾಗುವ ಅವಕಾಶ ಎಂದು ತಿಳಿದುಕೊಂಡಿದ್ದೇನೆ” ಎಂದು ಅವರು ಹೇಳಿದರು.
ತಮ್ಮ ರಾಜಕೀಯ ಪಯಣದಲ್ಲಿ ರಾಜಪ್ಪ ಮಾಸ್ತರ್, ರೈತನಾಯಕ ಎಂ.ಡಿ. ನಂಜುಂಡಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಾರ್ಗದರ್ಶನವನ್ನು ಸ್ಮರಿಸಿದ ಸಿದ್ದರಾಮಯ್ಯ, ಅವರ ನೆರವು ಇಲ್ಲದೆ ಈ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ರಾಜಕೀಯ ಜೀವನದಲ್ಲಿ ಎದುರಿಸಿದ ಟೀಕೆ, ದ್ವೇಷ, ಪಿತೂರಿ ಹಾಗೂ ಕುಟುಂಬದ ಮೇಲಿನ ಆರೋಪಗಳನ್ನು ನೆನಪಿಸಿಕೊಂಡ ಅವರು, “ನನ್ನ ಪತ್ನಿಯ ಮೇಲೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಲಾಯಿತು. ಆದರೂ ಹೋರಾಟದ ದಾರಿಯಿಂದ ಹಿಂದೆ ಸರಿಯಲಿಲ್ಲ” ಎಂದು ಹೇಳಿದರು.
ತಮ್ಮ ಆಡಳಿತಾವಧಿಯ ಸಾಧನೆಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಕರ್ನಾಟಕ ಇಂದು ದೇಶದಲ್ಲೇ ತಲಾ ಆದಾಯದಲ್ಲಿ ಮೊದಲ ಸ್ಥಾನದಲ್ಲಿದೆ, ಗ್ಯಾರಂಟಿ ಯೋಜನೆಗಳ ಮೂಲಕ ಸಾಮಾಜಿಕ ಭದ್ರತೆ ಒದಗಿಸಲಾಗಿದೆ, ಹಸಿವು ಮತ್ತು ಅಪೌಷ್ಠಿಕತೆ ಕಡಿಮೆಯಾಗಿದೆ ಎಂದು ಹೇಳಿದರು. ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸರ್ಕಾರ ಮಹತ್ವದ ಪ್ರಗತಿ ಸಾಧಿಸಿದೆ ಎಂದು ಅವರು ತಿಳಿಸಿದರು.
ಹದಿನೇಳು ಬಜೆಟ್ ಮಂಡಿಸಿರುವ ತೃಪ್ತಿ ವ್ಯಕ್ತಪಡಿಸಿದ ಅವರು, “ಇತಿಹಾಸದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಗುರುತಿಸಿಕೊಳ್ಳುವುದಕ್ಕಿಂತ ಜನರ ಏಳಿಗೆಗೆ ಕಾರಣವಾದ ಯೋಜನೆಗಳನ್ನು ನೀಡಿದ ನಾಯಕನಾಗಬೇಕು ಎಂಬ ಆಶಯದಿಂದ ಕೆಲಸ ಮಾಡಿದ್ದೇನೆ” ಎಂದರು.
ರಾಜಕೀಯ ನಿವೃತ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, “ಚುನಾವಣಾ ರಾಜಕಾರಣದಿಂದ ದೂರ ಸರಿದರೂ ಜನಸೇವೆಯ ಹೋರಾಟ ಮುಂದುವರಿಯಲಿದೆ” ಎಂದು ಘೋಷಿಸಿದರು. ಕೊನೆಯಲ್ಲಿ ರಾಜ್ಯದ ಜನತೆ, ಶಾಸಕರು, ಅಧಿಕಾರಿಗಳು ಹಾಗೂ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮತ್ತೊಮ್ಮೆ ವಂದನೆಗಳನ್ನು ಅರ್ಪಿಸಿದರು.
