ಮೈಸೂರು, ಮೇ 28- ಸಿಂಗಪೂರ್ ಪ್ರವಾಸ ಮುಗಿಸಿ ಮನೆಗೆ ಹಿಂದಿರುಗಿದ ದಂಪತಿಗೆ ಕಳ್ಳರು ಶಾಕ್ ನೀಡಿದ್ದಾರೆ. ಮನೆಯ ಬಾಗಿಲು ಮೀಟಿ ಒಳನುಗ್ಗಿದ ದುಷ್ಕರ್ಮಿಗಳು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ 500 ಅಮೆರಿಕನ್ ಡಾಲರ್ ದೋಚಿ ಪರಾರಿಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿ ವಿಶ್ವನಾಥ್ ರವೀಂದ್ರನ್ ಎಂಬುವವರ ಮನೆಯಲ್ಲಿ ಈ ಕಳವು ನಡೆದಿದೆ.
ಮೇ 21 ರಂದು ಸಿಂಗಪೂರ್ ಪ್ರವಾಸಕ್ಕೆ ತೆರಳಿದ್ದ ದಂಪತಿ ಮೇ 25 ರಂದು ಮೈಸೂರಿಗೆ ಹಿಂದಿರುಗಿದ್ದಾರೆ. ಮನೆಗೆ ಬಂದಾಗ ಮುಖ್ಯದ್ವಾರದ ಬಾಗಿಲು ಮೀಟಿ ತೆರೆದಿರುವುದು ಕಂಡುಬಂದಿದೆ.
ಒಳ ಪ್ರವೇಶಿಸಿದಾಗ ಮನೆಯಲ್ಲಿನ ಬಟ್ಟೆ- ಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ತಕ್ಷಣ ಪರಿಶೀಲಿಸಿದಾಗ 5 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ, 2 ಲಕ್ಷ ರೂ. ಮೌಲ್ಯದ 3 ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ 500 ಅಮೆರಿಕನ್ ಡಾಲರ್ ನಗದು ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಿಶ್ವನಾಥ್ ರವೀಂದ್ರನ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡದಿಂದ ಸಾಕ್ಷ್ಯ ಸಂಗ್ರಹಿಸಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
