ಬೆಂಗಳೂರು,ಮೇ31- ಬಿಟ್ಕಾಯಿನ್ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ( ಇಡಿ), ಪ್ರಕರಣದ ತನಿಖೆಯ ಭಾಗವಾಗಿ ವಿಚಾರಣೆಗೆ ಹಾಜರಾಗುವಂತೆ ಶಾಸಕ ಎನ್.ಎ.ಹ್ಯಾರೀಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ರಿಗೆ ಸಮನ್್ಸ ಜಾರಿ ಮಾಡಿದೆ.
ಇಡಿ ಜಾರಿ ಮಾಡಿರುವ ಸಮನ್್ಸ ನಿರ್ದೇಶನದಂತೆ, ನಲಪಾಡ್ ಸೋಮವಾರದಂದು ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ. ಈ ಪ್ರಕರಣವು ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದು, ಹಣ ವರ್ಗಾವಣೆ ಮತ್ತು ಬಿಟ್ಕಾಯಿನ್ ದುರ್ಬಳಕೆ ಆರೋಪದ ಮೇಲೆ ತನಿಖಾ ಸಂಸ್ಥೆಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ.
ಮೂವರನ್ನ ಬಂಧಿಸಿರುವ ಅಧಿಕಾರಿಗಳು
ಶ್ರೀಕಿ, ನಲಪಾಡ್ ಮನೆ ಮೇಲೆ ದಾಳಿ ನಡೆಸಿದ್ದ ಇಡಿ ಪರಿಶೀಲನೆ ನಡೆಸಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ ಇಡಿ ಅಧಿಕಾರಿಗಳು ಶ್ರೀಕಿ, ಸುನೇಶ್ ಹೆಗ್ಡೆ, ರಾಬಿನ್ ಖಂಡೇವಾಲ ಅವರನ್ನು ಬಂಧಿಸಿದ್ದಾರೆ. ಎರಡನೇ ಬಾರಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಬಿಟ್ ಕಾಯಿನ್ ಕೇಸ್ ಸಂಬಂಧಕೈ ನಾಯಕ ಮೊಹಮದ್ ನಲಪಾಡ್ ಅವರಿಗೆ ಇಡಿ ಎರಡನೇ ಬಾರಿ ನೋಟಿಸ್ ನೀಡಿದೆ. ರಾಜಕೀಯ ಕಾರ್ಯಕ್ರಮ ಹಿನ್ನೆಲೆ ಮೊದಲ ನೋಟಿಸ್ಗೆ ನಲಪಾಡ್ ಹಾಜರಾಗಿರಲಿಲ್ಲ. ಕಾರಣ ತಿಳಿಸಿ ಇಡಿಗೆ ಮನವಿ ಮಾಡಿದ್ದರು. ಬಿಟ್ ಕಾಯಿನ್ ಬಹುಕೋಟಿ ಹಗರಣದಲ್ಲಿ ಮೂವರನ್ನು ಬಂಧಿಸಿರುವ ಇಡಿ ತನಿಖೆ ತೀವ್ರಗೊಳಿಸಿದೆ.
ಇತ್ತೀಚೆಗಷ್ಟೇ ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಬೆಂಗಳೂರಿನ ಅಶೋಕನಗರದಲ್ಲಿರುವ ನಲಪಾಡ್ ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಸತತ 21 ಗಂಟೆಗಳ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಹಾರ್ಡ್ಡಿಸ್ಕ್, ವಿದೇಶಿ ವ್ಯವಹಾರದ ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು.
ಕೆಲ ವರ್ಷಗಳ ಹಿಂದೆ ಬಿಟ್ ಕಾಯಿನ್ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಬಿಡುಗಡೆ ಮಾಡಿದ್ದರು.
ಪ್ರಕರಣದ ಹಿನ್ನೆಲೆ :
ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ತನಿಖೆಯನ್ನು ತೀವ್ರಗೊಳಿಸಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ದಾಳಿಗಳು ನಡೆದಿದ್ದವು.ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿಗಳು ಮತ್ತು ಅವರೊಂದಿಗೆ ಸಂಪರ್ಕ ಹೊಂದಿರುವವರ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಶಾಸಕರೊಬ್ಬರ ಪುತ್ರರ ಹೆಸರು ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಚರ್ಚೆಗೆ ಬಂದಿದೆ. ಇಡಿ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯಾಸ್ಪದ ವ್ಯವಹಾರಗಳು ಮತ್ತು ಹಣಕಾಸಿನ ವಹಿವಾಟುಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಹಗರಣದಲ್ಲಿ ಬಿಟ್ಕಾಯಿನ್ ಮೂಲಕ ಅಕ್ರಮ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ. ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬಾತನ ಮೂಲಕ ನಡೆದಿದೆ ಎನ್ನಲಾದ ಈ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ಸಂಪರ್ಕ ಜಾಲವನ್ನು ಪತ್ತೆಹಚ್ಚುವುದು ಇಡಿಯ ಮುಖ್ಯ ಉದ್ದೇಶವಾಗಿದೆ.
