Homeರಾಜ್ಯಬೆಂಗಳೂರಲ್ಲಿ 4 ಲಕ್ಷ ಅಕ್ರಮ ಮತದಾರರು..!

ಬೆಂಗಳೂರಲ್ಲಿ 4 ಲಕ್ಷ ಅಕ್ರಮ ಮತದಾರರು..!

4 lakh illegal voters in Bengaluru..!

ಬೆಂಗಳೂರು,ಜೂ.1- ನಗರದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ ವೇಳೆ 3.5 ಲಕ್ಷದಿಂದ 4 ಲಕ್ಷದವರೆಗೆ ಅಕ್ರಮ ಮತದಾರರು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಕೆಲವು ಮತದಾರರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಹಂತದ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ರಾಜ್ಯದಲ್ಲಿ ಲಕ್ಷಾಂತರ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನಲ್ಲಿಯೂ ಈ ಪ್ರಕ್ರಿಯೆ ತೀವ್ರಗೊಂಡಿದೆ.ಚುನಾವಣಾ ಅಧಿಕಾರಿಗಳ ಅಂಕಿಅಂಶಗಳ ಪ್ರಕಾರ, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ನಗರ ಪಾಲಿಕೆಗಳ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 97 ಲಕ್ಷ ಮತದಾರರು ಇದ್ದಾರೆ. ಈ ಪೈಕಿ 3 ರಿಂದ 4 ಲಕ್ಷ ಮಂದಿ ರಾಜ್ಯದ ಇತರೆ ಜಿಲ್ಲೆಗಳು ಅಥವಾ ಹೊರ ರಾಜ್ಯಗಳ ಮತದಾರರ ಪಟ್ಟಿಯಲ್ಲಿಯೂ ಹೆಸರು ಹೊಂದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ, ಸುಮಾರು 11 ಸಾವಿರ ಮಂದಿ ಒಂದೇ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಹೆಸರು ಹೊಂದಿರುವುದು ಸಹ ಗಮನಕ್ಕೆ ಬಂದಿದೆ.ಅನರ್ಹರ ಹೆಸರು ಕೈಬಿಡಲು ಕ್ರಮ: ಎಸ್ಐಆರ್ ವೇಳೆ ಮೃತರಾದವರು, ವಿಳಾಸ ಬದಲಿಸಿದವರು ಹಾಗೂ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಹೆಸರು ಹೊಂದಿರುವ ಮತದಾರರನ್ನು ಗುರುತಿಸಲಾಗುತ್ತಿದೆ.

ನಿಯಮಾನುಸಾರ ಒಬ್ಬ ಮತದಾರನ ಹೆಸರು ಒಂದೇ ಮತಗಟ್ಟೆಯಲ್ಲಿ ಮಾತ್ರ ಉಳಿಯಬೇಕು. ಹೀಗಾಗಿ, ಮತದಾರರು ಕೊನೆಯದಾಗಿ ಮತ ಚಲಾಯಿಸಿರುವ ಅಥವಾ ಪ್ರಸ್ತುತ ವಾಸಿಸುವ ಸ್ಥಳದ ಆಧಾರದ ಮೇಲೆ ಒಂದು ಹೆಸರು ಉಳಿಸಿ ಉಳಿದ ದಾಖಲೆಗಳನ್ನು ತೆಗೆದುಹಾಕಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಯಶವಂತಪುರದಲ್ಲಿ ಅತಿ ಹೆಚ್ಚು ಪ್ರಕರಣ:
ಒಂದಕ್ಕಿಂತ ಹೆಚ್ಚು ಕಡೆ ಮತದಾನದ ಹಕ್ಕು ಹೊಂದಿರುವವರ ಸಂಖ್ಯೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಇರುವುದಾಗಿ ತಿಳಿದು ಬಂದಿದೆ.ಇದರ ಜೊತೆಗೆ ಆರ್.ಆರ್.ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಕೆ.ಆರ್.ಪುರಂ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞನಗರ, ಸಿ.ವಿ.ರಾಮನ್ ನಗರ, ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಕ್ಷೇತ್ರಗಳಲ್ಲಿಯೂ ಡೂಪ್ಲಿಕೇಟ್ ಮತದಾರರ ಹೆಸರುಗಳು ಪತ್ತೆಯಾಗಿವೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಆಗಸ್ಟ್ನಲ್ಲಿ ಕರಡು ಪಟ್ಟಿ: ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಗಸ್ಟ್ ತಿಂಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ನಂತರ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸ್ವೀಕರಿಸಿ ಪರಿಶೀಲನೆ ನಡೆಸಿ ಮುಂದಿನ ವರ್ಷದ ಜನವರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಯೋಜನೆ ಚುನಾವಣಾ ಇಲಾಖೆಯದ್ದಾಗಿದೆ.

ಮತದಾರರ ಪಟ್ಟಿಯ ಶುದ್ಧೀಕರಣದಿಂದ ಚುನಾವಣಾ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕವಾಗಲಿದ್ದು, ನಕಲಿ ಹಾಗೂ ಡೂಪ್ಲಿಕೇಟ್ ಮತದಾನಕ್ಕೆ ಕಡಿವಾಣ ಬೀಳಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

RELATED ARTICLES

Latest News