ಬೆಂಗಳೂರು, ಜೂ. 2- ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತಂಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುತ್ತಮುತ್ತ ಸಂಪುಟ ಸೇರುವ ಆಕಾಂಕ್ಷಿಗಳು ಸುತ್ತುವರೆದಿದ್ದರು.
ಮಾಜಿ ಸಚಿವರು, ಹಾಲಿ ಶಾಸಕರು, ಪ್ರಮುಖ ನಾಯಕರು ಎಡಬಿಡದೆ ಸಿದ್ದರಾಮಯ್ಯ ಅವರ ಬೆನ್ನತ್ತಿ ಅವಕಾಶಕ್ಕಾಗಿ ಅಂಗಲಾಚುತ್ತಿದ್ದುದ್ದು ಕಂಡು ಬಂತು. ಬೆಳಗ್ಗೆ ಸಿದ್ದರಾಮಯ್ಯ ಅವರು ದೆಹಲಿಯ ಸರವಣ ಭವನದಲ್ಲಿ ಉಪಾಹಾರ ಸೇವಿಸಲು ತೆರೆಳಿದ್ದ ಸಂದರ್ಭದಲ್ಲಿ ಅವರ ಜೊತೆ ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಆರ್.ಬಿ.ತಿಮಾಪೂರ್, ಡಾ.ಎಂ.ಸಿ. ಸುಧಾಕರ್, ಪುಟ್ಟರಂಗ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಜೊತೆಗಿದ್ದರು.
ಶಾಸಕರಾದ ಅಪ್ಪಾಜಿ ನಾಡಗೌಡ, ಕೋನರೆಡ್ಡಿ, ಪಿ.ಎಂ.ಅಶೋಕ್, ಎ.ಆರ್.ಕೃಷ್ಣಮೂರ್ತಿ ವಿಧಾನ ಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಮ್, ಐವಾನ್ ಡಿಸೋಜ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಈವರೆಗೂ ಹೈಕಮಾಂಡ್ ನಾಯಕರ ಜೊತೆ ಸಭೆ ನಡೆದಿಲ್ಲ. ಸಭೆಯಲ್ಲಿ ಯಾವೆಲ್ಲಾ ವಿಚಾರಗಳು ಚರ್ಚೆಯಾಗುತ್ತವೆ ಎಂಬುದು ತಮಗೆ ಗೊತ್ತಿಲ್ಲ ಎಂದಿದ್ದಾರೆ.
ಉಪಾಹಾರ ಸೇವಿಸಲು ಹೋಟೆಲ್‌ಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕೇಂದ್ರ ವಿದೇಶಾಂಗ ಸಚಿವ ಎಸ್.ಜಯಶಂಕರ್ ಎದುರಾದರು. ಈ ವೇಳೆ ಅವರನ್ನು ಹೇಗಿದ್ದೀರಾ? ಎಂದು ಸಿದ್ದರಾಮಯ್ಯ, ಉಭಯಕುಶಲೋಪರಿ ವಿಚಾರಿಸಿದರು. ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲಿ ಎರಡನೇ ಶಕ್ತಿ ಕೇಂದ್ರವಾಗಿದ್ದು, ಅವಕಾಶಕ್ಕಾಗಿ ಅವರ ಹಿಂದೆ ಆಕಾಂಕ್ಷಿಗಳು ಗಿರಕಿ ಹೊಡೆಯುತ್ತಿದ್ದಾರೆ.
