ಪ್ರಯಾಗ್‌ರಾಜ್(ಉ.ಪ್ರ), ಮೇ3- ಉತ್ತರಪ್ರದೇಶದ ಪ್ರಯಾರಾಜ್‌ನಲ್ಲಿ ಒಂದೇ ಕುಟುಂಬದ ಮೂವರ ತಲೆಗೆ ಒಡೆದು ಕೊಲೆ ಮಾಡಿರುವ ಘಟನೆ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಕ್ಷಿಣ ಮಲಕಾ ಚೌಕದ ನಿವಾಸಿಗಳಾದ ವೀರೇಂದ್ರ ವೈಶ್ಯ(65), ಪತ್ನಿ ಅನಿತಾ(60) ಹಾಗೂ 40 ವರ್ಷದ ಮಗಳು ಮೀನಾಕ್ಷಿ ಕೊಲೆಯಾಗಿರುವ ದುರ್ದೈವಿಗಳು. ಕೊಲೆ ಮಾಡಿದ ನಂತರ ಶವಗಳನ್ನು ಕೋಣೆಯೊಳಗೆ ಹಾಕಿ ಮತ್ತು ಹೊರಗಿನಿಂದ ಬಾಗಿಲನ್ನು ಲಾಕ್ ಮಾಡಲಾಗಿದೆ. ವೀರೇಂದ್ರ ಅವರ ಮಗ ಅಭಿಷೇಕ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.
ನಿನ್ನೆ ಮಧ್ಯಾಹ್ನ, ಮನೆಯ ಕೆಳಗೆ ಅಂಗಡಿಗಳನ್ನು ನಡೆಸುತ್ತಿರುವ ಜನರು ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದಾಗ, ವೀರೇಂದ್ರ, ಅನಿತಾ ಮತ್ತು ಮೀನಾಕ್ಷಿ ಅವರ ಶವಗಳು ಬಿದ್ದಿದ್ದವು.
ವೀರೇಂದ್ರ ವೈಶ್ಯ ದಕ್ಷಿಣ ಮಲಕಾ ಚೌಕದಲ್ಲಿ ದೊಡ್ಡ ಕಟ್ಟಡವನ್ನು ಹೊಂದಿದ್ದಾರೆ. ನೆಲ ಮಹಡಿಯಲ್ಲಿ ಡಜನ್‌ಗಟ್ಟಲೆ ಮನೆಗಳು ಮತ್ತು ಅಂಗಡಿಗಳಿವೆ. ಆದರೆ ಅವರು ತಮ ಪತ್ನಿ ಅನಿತಾ, ಮಗಳು ಮೀನಾಕ್ಷಿ ಮತ್ತು ಮಗ ಅಭಿಷೇಕ್ ಅವರೊಂದಿಗೆ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರು.
ಮೃತ ವೀರೇಂದ್ರ ಅವರ ಮಗ ಅಭಿಷೇಕ್ ನಾಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ. ಪೊಲೀಸರು ತಂಡವನ್ನು ರಚಿಸಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೊಲೆಯ ಉದ್ದೇಶ ಇನ್ನೂ ತಿಳಿದುಬಂದಿಲ್ಲ, ಆರೋಪಿಗಳನ್ನು ಗುರುತಿಸಲು ಸಿಸಿಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
