ಬೆಂಗಳೂರು,ಜೂ.3-ಪ್ರಮಾಣ ವಚನ ಸಮಾರಂಭಕ್ಕೆ ಪಾಸ್ ಹೊಂದಿದವರಿಗೆ ಮಾತ್ರ ಲೋಕಭವನದ ಒಳಗೆ ಪ್ರವೇಶಿಸಲು ಅವಕಾಶವಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪಾಸ್ ಇಲ್ಲದವರು ವಿನಾಕಾರಣ ಲೋಕಭವನದ ಬಳಿ ಬರಬೇಡಿ, ಒಳಗೆ ಬಿಡುವುದಿಲ್ಲ ಎಂದರು.
ಯಾವುದೇ ಕಾರಣಕ್ಕೂ ಪಾಸ್ಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಒಂದು ವೇಳೆ ದುರುಪಯೋಗ ವಾಗಿರುವುದು ಕಂಡುಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಒಬ್ಬರಿಗೆ ಒಂದೇ ಪಾಸ್. ಪ್ರತಿ ಪಾಸ್ಗೆ ಒಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ. ವಾಹನ ಪಾಸ್ ಹೊಂದಿರುವ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರವೇ ನೇರವಾಗಿ ಆವರಣದೊಳಗೆ ವಾಹನ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಆಹ್ವಾನ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಗೋಪಾಲಗೌಡ ವೃತ್ತವನ್ನು ದಾಟಿ ಮುಂದೆ ಹೋಗಲು ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ.
ಕಾರ್ಯಕ್ರಮಕ್ಕೆ ಆಗಮಿಸುವವರು ಗೋಪಾಲಗೌಡ ವೃತ್ತದಿಂದ ಪೊಲೀಸ್ ತಿಮಯ್ಯ ವೃತ್ತದ ಮುಖಾಂತರ ಲೋಕಭವನಕ್ಕೆ ಪ್ರವೇಶಿಸಬೇಕು.
ಬಿಗಿ ಬಂದೋಬಸ್ತ್:ಪದಗ್ರಹಣ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಧಿಕಾರಿಗಳೂ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ನಲ್ಲಿ ನಿಯೋಜಿಸಲಾಗಿದೆ.
ಇಡೀ ಜಾಗವನ್ನು ವಿವಿಧ ಸೆಕ್ಟರ್ಗಳಾಗಿ ವಿಂಗಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪತ್ರಿ ಸೆಕ್ಟರ್ಗೂ ಒಬ್ಬರು ಡಿಸಿಪಿ ದರ್ಜೆಯ ಅಧಿಕಾರಿಗೆ ನೇತೃತ್ವದ ಜವಾಬ್ದಾರಿ ನೀಡಲಾಗಿದೆ.
ಮೂರು ಮಂದಿ ಜಂಟಿ ಪೊಲೀಸ್ ಆಯುಕ್ತರು, 20 ಕ್ಕೂ ಡಿಸಿಪಿಗಳು, 50 ಕ್ಕೂ ಹೆಚ್ಚು ಎಸಿಪಿಗಳು, 100 ಕ್ಕೂ ಹೆಚ್ಚು ಇನ್್ಸಪೆಕ್ಟರ್ಗಳು, 300 ಕ್ಕೂ ಹೆಚ್ಚು ಪಿಎಸ್ಐಗಳು, 700 ಕ್ಕೂ ಹೆಚ್ಚು ಕಾನ್್ಸಟೇಬಲ್ಗಳು ಹಾಗೂ ಕೆಎಸ್ಆರ್ಪಿ ತುಕಡಿಗಳು ಸೇರಿದಂತೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.
