Homeರಾಜ್ಯಡಿಕೆಶಿ ಯುಗಾರಂಭ : ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

ಡಿಕೆಶಿ ಯುಗಾರಂಭ : ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

D.K. Shivakumar's era begins: Oath-taking as the 25th Chief Minister of Karnataka

ಬೆಂಗಳೂರು. ಜೂ.3- ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಸಂವಿಧಾನದ ಪುಸ್ತಕವನ್ನು ಹಿಡಿದು, ಗಂಗಾಧರಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆರಂಭದಲ್ಲಿ ವೇದಿಕೆಯಲ್ಲಿ ಎಲ್ಲಾ ಗಣ್ಯರಿಗೂ ಗುಚ್ಛ ನೀಡಿ ಆಹ್ವಾನಿಸಿದ ಡಿ.ಕೆ.ಶಿವಕುಮಾರ್, ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನಾ ವೇದಿಕೆಯಲ್ಲಿ ಇರಿಸಿದ್ದ ಅಜ್ಜಯ್ಯನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ರಾಜ್ಯಪಾಲರು ಅಧಿಕಾರ ಮತ್ತು ಗೌಪ್ಯತೆಯ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದಾಖಲೆಯ ದಸ್ತಾವೇಜುಗಳಿಗೆ ಸಹಿ ಮಾಡಿದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ರಾಜ್ಯಪಾಲರು ನೂತನ ಮುಖ್ಯಮಂತ್ರಿಯವರಿಗೆ ಹೂ ಗುಚ್ಚ ನೀಡಿ ಅಭಿನಂದಿಸಿದರು.

ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿಜ್ಞಾವಿಧಿ ಸ್ವೀಕರಿಸುವಾಗ ತಪ್ಪಾಗಿ ಓದಿದ್ದೀರಾ ಎಂದು ರಾಜ್ಯಪಾಲರು ಆಕ್ಷೇಪ ವ್ಯಕ್ತ ಪಡಿಸಿದರು. ಕಡತಗಳಿಗೆ ಸಹಿ ಹಾಕುವಾಗಲೂ ಅಧಿಕಾರಿಗಳು ಲೋಪವನ್ನು ಪರಮೇಶ್ವರ್ ಅವರ ಗಮನಕ್ಕೆ ತಂದರು.

ಸಂಪುಟ ದರ್ಜೆಯ ಸಚಿವರಾಗಿ ಕೆ.ಹೆಚ್.ಮುನಿಯಪ್ಪ ದೇವರ ಹೆಸರಿನಲ್ಲಿ, ಕೆ.ಜೆ.ಜಾರ್ಜ್ ದೇವರ ಹೆಸರಿನಲ್ಲಿ, ಎಂ.ಬಿ.ಪಾಟೀಲ್ ವಿಶ್ವ ಗುರು ಅಣ್ಣ ಬಸವಣ್ಣ, ಬಸವಾದಿ ಶರಣರ ಹಾಗೂ ಸಿದ್ದೇಶ್ವರ ಮಹಾ ಸ್ವಾಮೀಜಿ ಅವರ ಹೆಸರಿನಲ್ಲಿ, ರಾಮಲಿಂಗಾರೆಡ್ಡಿ ಶ್ರದ್ಧಾ ಪೂರ್ವಕವಾಗಿ ದೇವರ ಹೆಸರಿನಲ್ಲಿ, ಸತೀಶ್ ಜಾರಕಿಹೊಳಿ ಶ್ರದ್ಧಾ ಪೂರ್ವಕವಾಗಿ ದೇವರ ಹೆಸರಿನಲ್ಲಿ, ಕೃಷ್ಣ ಬೈರೇಗೌಡ ಶ್ರದ್ಧಾಪೂರ್ವಕವಾಗಿ, ಪ್ರಿಯಾಂಕ ಖರ್ಗೆ ಶ್ರದ್ಧಾಪೂರ್ವಕವಾಗಿ, ಯು.ಟಿ.ಖಾದರ್ ಅವರ ದೇವರ ಹೆಸರಿನಲ್ಲಿ, ಈಶ್ವರ್ ಖಂಡ್ರೆ ಅವರು ದೇವರ ಹಾಗೂ ಚನ್ನಬಸವ ಪಟ್ಟದೇವರ ಹೆಸರಿನಲ್ಲಿ, ಯತೀಂದ್ರ ಸಿದ್ದರಾಮಯ್ಯ , ಬೈರತಿ ಸುರೇಶ್, ಶರಣ ಪ್ರಕಾಶ್ ಪಾಟೀಲ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಆರಂಭದಲ್ಲಿ ವೇದಿಕೆಗೆ ಅಗಮಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೂತನ ಸಚಿವರ ಕೈ ಕುಲಕಿ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತ್ಮೀಯವಾಗಿ ಬರ ಮಾಡಿಕೊಂಡರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಅಪ್ಪಿಕೊಂಡು ಧನ್ಯವಾದ ಹೇಳಿದರು.ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ವೇದಿಕೆಯಲ್ಲಿದ್ದರು.

ಡಿ.ಕೆ.ಶಿವಕುಮಾರ್‌ರವರು ವೀರ ಗಂಗಾಧರಜ್ಜ ಅವರ ಹೆಸರನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದುಕೊಂಡಿದ್ದ ಅವರು ಶ್ವೇತವರ್ಣದ ವಸ್ತ್ರ ಧರಿಸಿದ್ದರು.ಸಾಮಾನ್ಯವಾಗಿ ಈವರೆಗೂ ಲೋಕಭವನದ ಗಾಜಿನ ಮನೆಯಲ್ಲಿ ಅಧಿಕಾರ ಸ್ವೀಕಾರ ಸಮಾರಂಭವು ಪೂರ್ವಾಭಿಮುಖವಾಗಿ ನಡೆಯುತ್ತಿತ್ತು. ಜ್ಯೋತಿಷಿಗಳ ಸಲಹೆ ಮೇರೆಗೆ ಇದೇ ಮೊದಲ ಬಾರಿಗೆ ಡಿ ಕೆ ಶಿವಕುಮಾರ್‌ ಅವರು ಪಶ್ಚಿಮಾಭಿಮುಖವಾಗಿ ಅಧಿಕಾರ ಸ್ವೀಕರಿಸಿದ್ದು ವಿಶೇಷ.

ರಾಜ್ಯದ ಅತ್ಯಂತ ಪ್ರಭಾವ ಒಕ್ಕಲಿಗ ಸಮುದಾಯದ ಎಂಟನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಡಿಕೆಶಿ ಪಾತ್ರರಾಗಿದ್ದಾರೆ.ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಾ.ಜಿ.ಪರಮೇಶ್ವರ ಅವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಡಾ.ಅಂಬೇಡ್ಕರ್‌ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ತಮ ಸಂಪುಟಕ್ಕೆ ಶಿವಕುಮಾರ್‌ ಪ್ರಾದೇಶಿಕತೆ, ಹಿರಿತನ, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು 13 ಮಂದಿ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಿದ್ದಾರೆ.ಸಂಪುಟದಲ್ಲಿ ಮೂವರು ಒಕ್ಕಲಿಗರು, ಮೂವರು ಪರಿಶಿಷ್ಟ ಜಾತಿ, ಮೂವರು ಲಿಂಗಾಯತರು, ಇಬ್ಬರು ಹಿಂದುಳಿದ ಸಮುದಾಯದಿಂದ, ಒಬ್ಬರು ಪರಿಶಿಷ್ಟ ಪಂಗಡದಿಂದ, ಕ್ರಿಶ್ಚಿಯನ್‌, ಮುಸ್ಲಿಂ ಸಮುದಾಯದಿಂದ ತಲಾ ಒಬ್ಬರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಂಪುಟದಲ್ಲಿ ಬೆಂಗಳೂರು, ಮೈಸೂರು, ತುಮಕೂರು, ಕಲಬುರಗಿ, ಬಿಜಾಪುರ, ಬೀದರ್‌, ಬೆಳಗಾವಿ ಜಿಲ್ಲೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಮಾಣವಚನ ಸ್ವೀಕರಿಸಿದ ಸಚಿವರು :
ಡಾ.ಜಿ.ಪರಮೇಶ್ವರ್‌ (ಕೊರಟಗೆರೆ) ದಲಿತ
ಎಂ.ಬಿ.ಪಾಟೀಲ್‌ (ಬಬಲೇಶ್ವರ) ಲಿಂಗಾಯತ
ಕೆ.ಜೆ.ಜಾರ್ಜ್‌ (ಸರ್ವಜ್ಞನಗರ) ಕ್ರಿಶ್ಚಿಯನ್‌
ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್‌) ರೆಡ್ಡಿ ಒಕ್ಕಲಿಗ
ಸತೀಶ್‌ ಜಾರಕಿಹೊಳಿ (ಯಮಕನಮರಡಿ) ವಾಲೀಕಿ
ಪ್ರಿಯಾಂಕ ಖರ್ಗೆ (ಚಿತ್ತಾಪುರ) ದಲಿತ
ಯು.ಟಿ.ಖಾದರ್‌ (ಮಂಗಳೂರು) ಅಲ್ಪಸಂಖ್ಯಾತ
ಕೆ.ಎಚ್‌.ಮುನಿಯಪ್ಪ (ದೇವನಹಳ್ಳಿ) ದಲಿತ
ಕೃಷ್ಣ ಭೈರೇಗೌಡ (ಬ್ಯಾಟರಾಯನಪುರ) ಒಕ್ಕಲಿಗ
ಡಾ ಯತೀಂದ್ರ ಸಿದ್ದರಾಮಯ್ಯ (ವಿಧಾನಪರಿಷತ್‌) ಕುರುಬ
ಡಾ.ಶರಣ ಪ್ರಕಾಶ್‌ ಪಾಟೀಲ್‌ (ಸೇಡಂ) ಲಿಂಗಾಯತ
ಈಶ್ವರ ಖಂಡ್ರೆ (ಬಾಲ್ಕಿ) ಲಿಂಗಾಯತ
ಬೈರತಿ ಸುರೇಶ್‌ (ಹೆಬ್ಬಾಳ) ಕುರುಬ

RELATED ARTICLES

Latest News