ಬೆಂಗಳೂರು, ಜೂ.4- ನಗರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026 ಕಾರ್ಯಕ್ಕೆ ಭಾರತ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಅರ್ಹತಾ ದಿನಾಂಕವನ್ನು ಅ.1 ಎಂದು ನಿಗದಿಪಡಿಸಲಾಗಿದ್ದು, ಈ ಕುರಿತು ನಡೆದ ಮಾಧ್ಯಮಗೋಷ್ಠಿಯಲ್ಲಿ ಅಧಿಕಾರಿಗಳು ಮಾಹಿತಿ ನೀಡಲಾಯಿತು.
ಪರಿಷ್ಕರಣೆ ಕಾರ್ಯದ ಅಂಗವಾಗಿ ಜೂ.20ರಿಂದ 29ರ ವರೆಗೆ ಸಿದ್ಧತೆ, ತರಬೇತಿ ಹಾಗೂ ಮುದ್ರಣ ಕಾರ್ಯ ನಡೆಯಲಿದ್ದು, ಜೂ.30ರಿಂದ ಜುಲೈ 29ರ ವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಜು.29ರಂದು ಮತಗಟ್ಟೆಗಳ ಮರುಹೊಂದಾಣಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಆ.5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆ.5ರಿಂದ ಸೆ.4ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಕಾರ್ಯ ಆ.5ರಿಂದ ಅ.3ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅ.7ರಂದು ಪ್ರಕಟಿಸಲಾಗುವುದು.
ಇದೇ ವೇಳೆ, 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಪೂರ್ವಭಾವಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಲಾಯಿತು. ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಜೂನ್ 16ರಂದು ಇ-ರೋಲ್ ಫ್ರೀಜ್ ಆಗಲಿರುವ ಹಿನ್ನೆಲೆಯಲ್ಲಿ, ಬಾಕಿ ಉಳಿದಿರುವ ನಮೂನೆ 6, 6ಎ, 7 ಹಾಗೂ 8ರ ನಮೂನೆ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಮನೆ-ಮನೆ ಸಮೀಕ್ಷೆ ಆರಂಭಕ್ಕೂ ಮುನ್ನ ಚುನಾವಣಾ ನೋಂದಣಿ ಅಧಿಕಾರಿಗಳು ಹಾಗೂ ಬೂತ್ ಲೆವಲ್ ಏಜೆಂಟ್‌ಗಳ ಜೊತೆ ಸಭೆ ನಡೆಸಿ, ಎಸ್‌ಐಆರ್ ವೇಳಾಪಟ್ಟಿ ಮತ್ತು ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಲಿದ್ದಾರೆ.
ರಾಜಕೀಯ ಪಕ್ಷಗಳು ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟವಾಗುವವರೆಗೆ ಪ್ರತಿದಿನ 50 ಅರ್ಜಿ ಸಲ್ಲಿಸಲು ಅವಕಾಶವಿದ್ದು, ಕರಡು ಪಟ್ಟಿ ಪ್ರಕಟವಾದ ಬಳಿಕ ದಿನಕ್ಕೆ ಗರಿಷ್ಠ 10 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದಾಗಿದೆ.
ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವಲ್ ಏಜೆಂಟ್‌ಗಳನ್ನು ನೇಮಕ ಮಾಡಿ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕರಿಸುವಂತೆ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮನವಿ ಮಾಡಲಾಗಿದೆ.
