ಬೆಂಗಳೂರು, ಜೂ. 4- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಮಾರನೇ ದಿನವೇ ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನ ಕಾಣಿಸಿಕೊಂಡಿದ್ದು, ಹಿರಿಯರಾದ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಲು ಮುಂದಾಗಿದ್ದು, ಇರಿಸು- ಮುರಿಸಿನ ವಾತಾವರಣವನ್ನು ನಿರ್ಮಿಸಿದೆ.
ಆದೇ ರೀತಿ ಸಚಿವ ಕೃಷ್ಣಾ ಭೈರೇಗೌಡ ಅವರು ಕೂಡ ತಮಿಂದ ಕಂದಾಯ ಖಾತೆ ಕಸಿದುಕೊಳ್ಳುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟುಹಿಡಿದಿರುವ ರಾಮಲಿಂಗಾರೆಡ್ಡಿ ಜಲ ಸಂಪನೂಲ ಖಾತೆ ನಿರ್ವಹಿಸಲು ನಿರಾಕರಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯಅವರ ಸಂಪುಟದಲ್ಲಿ ರಾಮಲಿಂಗಾರೆಡ್ಡಿಯವರಿಗೆ ನಗರಾಭಿವೃದ್ಧಿ ಖಾತೆ ನೀಡುವ ಚರ್ಚೆಯಾಗಿತ್ತು.
ಆ ವೇಳೆ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ರಾಮಲಿಂಗಾರೆಡ್ಡಿ ಅವರ ಮನೆಗೆ ತೆರಳಿ, ಮನವೊಲಿಸಿದ್ದಲ್ಲದೇ ಆರಂಭದ ಎರಡೂವರೆ ವರ್ಷಗಳ ಕಾಲ ಬೆಂಗಳೂರು ನಗರಾಭಿವೃದ್ಧಿಯನ್ನು ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಅದಕ್ಕೆ ಆಗ ರಾಮಲಿಂಗಾರೆಡ್ಡಿ ಒಪ್ಪಿದ್ದರು. ಈಗ ಸಂಪುಟ ರಚನೆಯಾದಾಗ ಬೆಂಗಳೂರಿನ ನಗರಾಭಿವೃದ್ಧಿ ಬದಲಾಗಿ ಜಲಸಂಪನೂಲ ಖಾತೆ ನೀಡಲು ನಿರ್ಧರಿಸಲಾಗಿದೆ.
ಜಲ ಸಂಪನೂಲ ಇಲಾಖೆಗೆ 37,800 ಕೋಟಿ ರೂ. ಹಂಚಿಕೆಯಾಗಿದ್ದು, ಅದರಲ್ಲಿ 37,300 ಕೋಟಿ ರೂ.ಗಳಷ್ಟು ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಕರೆದು, ಮುಂದಿನ ಎರಡು ವರ್ಷಗಳ ಕೆಲಸಗಳನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿದೆ. ಇನ್ನೂ ಜಲಸಂಪನೂಲ ಇಲಾಖೆಯಲ್ಲಿ ಬಾಕಿಯಿರುವುದು ಕೋರ್ಟ್ ತಗಾದೆ ಪ್ರಕರಣಗಳಷ್ಟೆ. ಅಲ್ಲಿ ಕೆಲಸ ಮಾಡಲು ಏನೂ ಉಳಿದಿಲ್ಲ ಎಂಬ ಅಸಮಾಧಾನ ರಾಮಲಿಂಗಾರೆಡ್ಡಿಯವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ ರಾಮಲಿಂಗಾರೆಡ್ಡಿಯವರು ರಾಜೀನಾಮೆ ಬರೆದ ಪತ್ರವನ್ನು ಮಡಚಿ ತಮ ಜೇಬಿನಲ್ಲಿಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ವಿಧಾನಸೌಧದಲ್ಲಿ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಆದರೆ ಇದನ್ನು ಒಪ್ಪದ ಡಿ.ಕೆ.ಶಿವಕುಮಾರ್ ಮನವೊಲಿಸಿ, ಹಿರಿಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಬಲವಂತ ಪಡಿಸಿ ಕರೆದೊಯ್ದಿದ್ದಾರೆ. ನಿಮ ಆಸೆಯಂತೆ ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನೇ ವಹಿಸಲು ಹೈಕಮಾಂಡ್ ಬಳಿ ಚರ್ಚೆ ಮಾಡುತ್ತೇನೆ. ದುಡುಕಬೇಡಿ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಮೊದಲು 2019ರ ಜುಲೈನಲ್ಲಿ ಆಪರೇಷನ್ ಕಮಲ ನಡೆದು, ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ವೇಳೆಯಲ್ಲಿ ರಾಮಲಿಂಗಾರೆಡ್ಡಿಯವರು ಕಾಂಗ್ರೆಸ್‌ನ 14 ಜನರ ಜೊತೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆಗ ಕನಕಪುರದಿಂದ ಸುಂಟರಗಾಳಿಯಂತೆ ಬಂದ ಡಿ.ಕೆ.ಶಿವಕುಮಾರ್ ವಿಧಾನಸಭಾಧ್ಯಕ್ಷರ ಕೊಠಡಿಗೆ ತೆರೆಳಿ ಅಲ್ಲಿ ರಾಮಲಿಂಗಾರೆಡ್ಡಿಯವರ ಕೈಲಿದ್ದ ರಾಜೀನಾಮೆ ಪತ್ರವನ್ನು ಕಸಿದು, ಹರಿದು ಬಿಸಾಕಿ ಕರೆದೊಯ್ದಿದ್ದರು. ಇಬ್ಬರ ನಡುವೆಯೂ ಉತ್ತಮ ಭಾಂದವ್ಯವಿತ್ತು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆ ರಾಮನಗರಕ್ಕೆ ರಾಮಲಿಂಗಾರೆಡ್ಡಿಯವರೇ ಉಸ್ತುವಾರಿ ಸಚಿವರಾಗಿದ್ದರು.
ಸಂಭವನೀಯ ಖಾತೆಗಳು :
ಡಿ ಕೆ ಶಿವಕುಮಾರ್(ಮುಖ್ಯಮಂತ್ರಿ) ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ, ಗುಪ್ತಚರ
ಡಾ. ಜಿ ಪರಮೇಶ್ವರ (ಉಪಮುಖ್ಯಮಂತ್ರಿ) – ಕಂದಾಯ
ರಾಮಲಿಂಗ ರೆಡ್ಡಿ- ಬೆಂಗಳೂರು ಉಸ್ತುವಾರಿ( ಮುಜರಾಯಿ)
ಸತೀಶ್ ಜಾರಕಿಹೊಳಿ- ಲೋಕೋಪಯೋಗಿ
ಕೆ ಜೆ ಜಾರ್ಜ್- ಇಂಧನ
ಕೆ ಹೆಚ್ ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ
ಈಶ್ವರ್ ಖಂಡ್ರೆ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಎಂ ಬಿ ಪಾಟೀಲ್- ಬೃಹತ್ ಕೈಗಾರಿಕೆ
ಡಾ. ಶರಣಪ್ರಕಾಶ್ ಪಾಟೀಲ್- ವೈದ್ಯಕೀಯ ಶಿಕ್ಷಣ
ಪ್ರಿಯಾಂಕ ಖರ್ಗೆ -ಗೃಹ ಮತ್ತು ಐಟಿ-ಬಿಟಿ
ಯು ಟಿ ಖಾದರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಬೈರತಿ ಸುರೇಶ್- ಸಾರಿಗೆ
ಕೃಷ್ಣ ಬೈರೇಗೌಡ – ಬೃಹತ್ ನೀರಾವರಿ
ಡಾ. ಯತೀಂದ್ರ ಸಿದ್ದರಾಮಯ್ಯ- ನಗರಾಭಿವೃದ್ಧಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ
ಕರ್ನಾಟಕ ರಾಜಕಾರಣದಲ್ಲಿ ಸೋಲಿಲ್ಲದೇ ಸತತವಾಗಿ 8 ಬಾರಿ ಗೆದ್ದಿರುವ ಹಾಲಿ ಶಾಸಕರ ಪೈಕಿ ರಾಮಲಿಂಗಾರೆಡ್ಡಿ ಪ್ರಮುಖರಾಗಿದ್ದಾರೆ. ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ 8 ಬಾರಿ ಗೆದ್ದಿದ್ದಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಅವರಿಬ್ಬರೂ ಸೋಲು ಅನುಭವಿಸಿದ್ದಾರೆ.
ಕೃಷ್ಣಭೈರೇಗೌಡ ಅವರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಉತ್ತಮ ಕೆಲಸ ನಿರ್ವಹಿಸಿದ್ದಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆದರೆ ಅವರಿಗೆ ಪ್ರಸ್ತುತ ಕಂದಾಯ ಇಲಾಖೆ ಬದಲಿಗೆ ಜಲ ಸಂಪನೂಲ ಇಲಾಖೆ ನೀಡುವ ಚರ್ಚೆ ನಡೆದಿದೆ.
ಇದಕ್ಕಾಗಿ ಅವರು ಕೂಡ ಅಸಮಾಧಾನ ಹೊಂದಿರುವುದಾಗಿ ತಿಳಿದು ಬಂದಿದೆ.ಬೆಂಗಳೂರು ನಗರಾಭಿವೃದ್ಧಿ, ಜಲ ಸಂಪನೂಲ, ಕಂದಾಯ ಖಾತೆಗಳ ವಿಚಾರವಾಗಿ ತಗಾದೆಗಳು ಕಂಡು ಬಂದಿದ್ದು, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ ತಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಮತ್ತೊಂದೆಡೆ ಕೆ.ಎಚ್.ಮುನಿಯಪ್ಪ ಸಮಾಜ ಕಲ್ಯಾಣ ಇಲಾಖೆಗೆ ಪಟ್ಟು ಹಿಡಿದಿದ್ದಾರೆ.ಉಳಿದಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್-ಕಂದಾಯ, ಯು.ಟಿ.ಖಾದರ್-ಆರೋಗ್ಯ ಮತ್ತು ಕುಟುಂಬಕಲ್ಯಾಣ, ಕೆ.ಎಚ್.ಮುನಿಯಪ್ಪ-ಆಹಾರ ಮತ್ತು ನಾಗರಿಕ ಪೂರೈಕೆ, ಸತೀಶ್ ಜಾರಕಿಹೊಳಿ-ಲೋಕೋಪಯೋಗಿ, ಕೆ.ಜೆ.ಜಾರ್ಜ್-ಇಂಧನ, ಪ್ರವಾಸೋಧ್ಯಮ, ಎಂ.ಬಿ.ಪಾಟೀಲ್-ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಭೈರತಿ ಸುರೇಶ್-ಸಾರಿಗೆ, ಪ್ರಿಯಾಂಕ್ ಖರ್ಗೆ-ಗೃಹ, ಮಾಹಿತಿ ತಂತ್ರಜ್ಞಾನ, ಕೃಷ್ಣಭೈರೇಗೌಡ-ಜಲಸಂಪನೂಲ ಅಥವಾ ನಗರಾಭಿವೃದ್ಧಿ, ಈಶ್ವರ್ ಖಂಡ್ರೆ-ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್, ಯತೀಂದ್ರ ಸಿದ್ದರಾಮಯ್ಯ-ಹಿಂದುಳಿದ ವರ್ಗಗಳ ಕಲ್ಯಾಣ, ಶರಣಪ್ರಕಾಶ್ ಪಾಟೀಲ್-ವೈದ್ಯಕೀಯ ಶಿಕ್ಷಣ ಖಾತೆ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ.ಇಂದು ಸಂಜೆಯೊಳಗಾಗಿ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಹೊರ ಬೀಳಲಿದೆ.
