ಬೆಂಗಳೂರು, ಜೂ.5- ಜಾರಿ ನಿದೇರ್ಶನಾಲಯ (ಇಡಿ) ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕ್ರಿಪ್ಟೊ ಕರೆನ್ಸಿ ಟ್ರೇಡರ್ ರಾಬಿನ್ ಖಂಡೇಲ್ವಾಲ್‌ನನ್ನು ಬಂಧಿಸಲಾಗಿದೆ. ಈತ ಹ್ಯಾಕ್ ಮಾಡಿದ ಹಣವನ್ನು ಕ್ರಿಪ್ಟೊ ಕರೆನ್ಸಿ ನಗದು ರೂಪಕ್ಕೆ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ವಿವಿಧ ಕ್ರಿಪ್ಟೊ ಕರೆನ್ಸಿ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ ಹಣದ ಜಾಡನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದರು. ರಾಬಿನ್ ಖಂಡೇಲ್ವಾಲ್ ಈ ಅಕ್ರಮ ಹಣವನ್ನು ಹವಾಲ ಮಾರ್ಗಗಳ ಮೂಲಕ ಅಥವಾ ಇತರ ಬ್ಯಾಂಕಿಂಗ್ ವ್ಯವಹಾರಗಳ ಮೂಲಕ ವರ್ಗಾಯಿಸಲು ಸಹಾಯ ಮಾಡುತ್ತಿದ್ದನೆಂದು ಅಧಿಕಾರಿಗಳು ಆರೋಪಿಸಿದ್ದಾರೆ.
ರಾಬಿನ್ ಅಪರಾಧದಿಂದ ಬಂದ ಹಣವನ್ನು ಹೊಂದಿಕೆ, ಸ್ವಾಧೀನ, ಮರೆಮಾಚುವಿಕೆ ಹಾಗೂ ವರ್ಗಾವಣೆಗೆ ನೇರವಾಗಿ ಸಹಕಾರ ನೀಡಿದ್ದಾನೆ. ತನಿಖೆಯ ವೇಳೆ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡದೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರಿಂದ ತನಿಖೆಗೆ ಅಡ್ಡಿ ಯಾಗಿದೆ ಎಂದು ಇಡಿ ಹೇಳಿದೆ.
ಈ ಹಿನ್ನೆಲೆಯಲ್ಲಿ ರಾಬಿನ್ ಖಂಡೇಲ್ವಾಲ್ ಅವರನ್ನು ಬಂಧಿಸಿರುವ ಇಡಿ, ಶ್ರೀಕಿ ಸೈಬರ್ ಹ್ಯಾಕಿಂಗ್ ಪ್ರಕರಣದ ಹಣಕಾಸು ಜಾಲದ ಬಗ್ಗೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
2016-17ರಿಂದಲೇ ಶ್ರೀಕಿ ಗಳಿಸಿದ್ದ ಅಕ್ರಮ ಹಣವನ್ನು ಕ್ರಿಪ್ಟೊ ಕರೆನ್ಸಿ ವ್ಯವಹಾರಗಳ ಮೂಲಕ ವೈಟ್ ಮನಿಯನ್ನಾಗಿ ಪರಿವರ್ತಿಸಲು ರಾಬಿನ್ ಪ್ರಮುಖ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಭಾರತದ ಹೊರಗಿನ ಹಲವು ಕ್ರಿಪ್ಟೊ ಕರೆನ್ಸಿ ಟ್ರೇಡಿಂಗ್ ವೇದಿಕೆಗಳಲ್ಲಿ ಖಾತೆಗಳನ್ನು ನಿರ್ವಹಿಸಿದ್ದ ಆತ, ವಿವಿಧ ದೇಶಗಳಿಗೆ ಹಣ ವರ್ಗಾವಣೆ ನಡೆಸಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದಲ್ಲದೆ, ಧರ್ಮಸ್ಥಳ, ಆರ್ಗ್ ಎಂಬ ಡೊಮೇನ್‌ನ ಮಾಲೀಕತ್ವ ಬದಲಾವಣೆಯಲ್ಲಿಯೂ ರಾಬಿನ್ ಪಾತ್ರವಿರುವುದು ಪತ್ತೆಯಾಗಿದೆ. ಶ್ರೀಕಿ ಮತ್ತು ರಾಬಿನ್ ನಡುವಿನ ವಾಟ್‌್ಸಆ್ಯಪ್ ಸಂಭಾಷಣೆಗಳ ಪರಿಶೀಲನೆಯ ವೇಳೆ ಈ ಮಾಹಿತಿ ಬಹಿರಂಗವಾಗಿದೆ.
2026ರ ಮೇ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಿದ ಹೇಳಿಕೆಯಲ್ಲಿ ರಾಬಿನ್ ತಾನು, Namecheap.com ವೆಬ್ಸೈಟ್ ಮೂಲಕ ಡೊಮೇನ್ ಮಾಲೀಕತ್ವ ಬದಲಾವಣೆ ಮಾಡಿದ್ದು, ಅದರ ಪಾವತಿಯನ್ನು ಬಿಟ್ಕಾಯಿನ್ ಮೂಲಕ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಆ ಬಿಟ್‌ಕಾಯಿನ್‌ಗಳನ್ನು ಹೇಗೆ ಪಡೆದಿದ್ದಾನೆ ಎಂಬುದಕ್ಕೆ ಸಮರ್ಪಕ ವಿವರಣೆ ನೀಡಲು ವಿಫಲನಾಗಿದ್ದ ಎಂದು ಇಡಿ ತಿಳಿಸಿದೆ.
ತನಿಖೆಯಲ್ಲಿ ರಾಬಿನ್ ಯುನೈ ಟೆಡ್ ಕಿಂಗ್‌ಡಮ್‌ನಲ್ಲಿ ಎರಡು ಕಂಪನಿಗಳನ್ನು ಸ್ಥಾಪಿಸಿದ್ದೂ ಪತ್ತೆಯಾಗಿದೆ. ಲಂಡನ್‌ನಲ್ಲಿ Sigma Trading Corporation Ltd ಮತ್ತು Supriore Solutions Ltd ಹೆಸರಿನ ಸಂಸ್ಥೆಗಳನ್ನು ಆರಂಭಿಸಿ, ಅವುಗಳ ಹೆಸರಿನಲ್ಲಿ Wise.com. ಮೂಲಕ ಬ್ಯಾಂಕ್ ಖಾತೆ ತೆರೆದಿದ್ದಾನೆ ಎನ್ನಲಾಗಿದೆ. ಆದರೆ, ಆ ಖಾತೆಗಳ ವಿವರಗಳನ್ನು ತನಿಖಾ ಸಂಸ್ಥೆಗೆ ನೀಡಿಲ್ಲ ಎಂದು ಇಡಿ ಆರೋಪಿಸಿದೆ.
