Homeಬೆಂಗಳೂರುಶಾಪಿಂಗ್‌ಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಗೃಹಿಣಿ ಶವವಾಗಿ ಪತ್ತೆ

ಶಾಪಿಂಗ್‌ಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಗೃಹಿಣಿ ಶವವಾಗಿ ಪತ್ತೆ

Housewife who went missing after saying she was going shopping found dead

ಬೆಂಗಳೂರು,ಜೂ.5-ಶಾಪಿಂಗ್‌ಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಗೃಹಿಣಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯ ತಾಯಿ ಕುಂಬಳಗೋಡು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.ಕೊಮ್ಮಘಟ್ಟದ ನಿವಾಸಿ ಚೈತ್ರಾ (29) ಮೃತಪಟ್ಟ ಗೃಹಿಣಿ.

2020 ರಲ್ಲಿ ಶರತ್‌ಕುಮಾರ್‌ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದು, ಕೊಮ್ಮಘಟ್ಟದಲ್ಲಿ ಬಾಡಿಗೆ ಮನೆ ಮಾಡಿಕೊಂಡು ದಂಪತಿ ವಾಸವಾಗಿದ್ದು, ಒಬ್ಬಳು ಮಗಳಿದ್ದಾಳೆ.ಈ ನಡುವೆ ವರದಕ್ಷಿಣೆ ತರುವಂತೆ ಚೈತ್ರಾಗೆ ಪತಿ ಕಿರುಕುಳ ನೀಡುತ್ತಿದ್ದನು. ಇದೇ ವಿಚಾರವಾಗಿ ಆಗಾಗ್ಗೆ ದಂಪತಿ ನಡುವೆ ಜಗಳವಾಗುತ್ತಿದ್ದರಿಂದ ತವರು ಮನೆಯವರು ಹಣ ಕೊಟ್ಟು ರಾಜಿ ಪಂಚಾಯಿತಿ ಮಾಡಿ ಅನ್ಯೋನ್ಯವಾಗಿ ಜೀವನ ಸಾಗಿಸುವಂತೆ ಬುದ್ದಿವಾದ ಹೇಳಿದ್ದಾರೆ.

ಕೆಲ ದಿನಗಳ ನಂತರ ಮತ್ತೆ ಶರತ್‌ ಮನೆಗೆ ಮದ್ಯ ಸೇವಿಸಿ ಬಂದು ಪತ್ನಿ ಜೊತೆ ಕ್ಯಾತೆ ತೆಗೆದು ಕಾರು ತೆಗೆದುಕೊಳ್ಳಲು ತವರಿನಿಂದ ಹಣ ತರುವಂತೆ ಕಿರುಕುಳ ನೀಡಲಾರಂಭಿಸಿದ್ದಾನೆ. ಪತಿಯ ವರ್ತನೆಯಿಂದ ಚೈತ್ರಾ ಬೇಸತ್ತು ಹೋಗಿದ್ದಳು.

ಮೊನ್ನೆ ಬೆಳಗ್ಗೆ 10.30 ರ ಸುಮಾರಿನಲ್ಲಿ ಚೈತ್ರಾ ಗಂಡನಿಗೆ ಕರೆ ಮಾಡಿ ಮಗಳು ಏಷಿಕಾಳನ್ನು ಪಕ್ಕದ ಮನೆಯಲ್ಲಿ ಬಿಟ್ಟು ನಾನು ಶಾಪಿಂಗ್‌ಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದಾಳೆ.
ಆದರೆ ಸಂಜೆಯಾದರೂ ಬಂದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಆಕೆಯ ಸುಳಿವು ಸಿಕ್ಕಿಲ್ಲ. ಹಾಗಾಗಿ ಹೇರೋಹಳ್ಳಿ ಕ್ರಾಸ್‌ನ ಮಹದೇಶ್ವರ ನಗರದಲ್ಲಿರುವ ಅತ್ತೆ ಲಕ್ಷ್ಮೀದೇವಮ್ಮ ಅವರಿಗೆ ಕರೆ ಮಾಡಿ ನಿಮ್ಮ ಮಗಳು ಕಾಣುತ್ತಿಲ್ಲವೆಂದು ತಿಳಿಸಿದ್ದಾನೆೆ. ತಕ್ಷಣ ಲಕ್ಷ್ಮೀದೇವಮ್ಮ ಅವರು ಸಂಬಂಽಕರು ಹಾಗೂ ಚೈತ್ರಾ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದ್ದಾರೆ.

ಈ ನಡುವೆ ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಶರತ್‌ ಅತ್ತೆ ಮನೆಗೆ ಕರೆ ಮಾಡಿ ಚೈತ್ರಾ ಕುಮ್ಮಘಟ್ಟ ಕೆರೆಯಲ್ಲಿ ಬಿದ್ದು ಸತ್ತಿದ್ದಾಳೆ ಎಂದು ಹೇಳಿದ್ದಾನೆ.ಈ ವಿಷಯ ಕೇಳಿ ಅಘಾತಕ್ಕೊಳಗಾದ ಅತ್ತೆ ಮನೆಯವರು ಸ್ಥಳಕ್ಕೆ ಬಂದು ಮೃತದೇಹವನ್ನು ನೋಡಿ ತಮ್ಮ ಮಗಳದ್ದೇ ಎಂದು ಹೇಳಿದ್ದಾರೆ.

ನಂತರ ಕುಂಬಳಗೋಡು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮಗಳ ಸಾವಿಗೆ ಅಳಿಯ ಶರತ್‌ಕುಮಾರ್‌ ಕಾರಣ. ಆತ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಹಿಂಸೆಯೇ ಇದಕ್ಕೆ ಕಾರಣ. ನನ್ನ ಮಗಳ ಸಾವಿನ ಬಗ್ಗೆ ಸಂಶಯವಿದ್ದು, ಕೂಲಂಕುಶವಾಗಿ ತನಿಖೆ ಮಾಡಿ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪ್ರೀತಿಸಿದ ಯುವಕನನ್ನು ನಂಬಿ ಆತನೊಂದಿಗೆ ಮದುವೆಯಾಗಿ ಕೇವಲ 6 ವರ್ಷದೊಳಗೆ ಚೈತ್ರಾ ಜೀವನ ಅಂತ್ಯಗೊಳಿಸಿಕೊಂಡಿರುವುದು ದುರ್ದೈವ.

RELATED ARTICLES

Latest News