ಬೆಂಗಳೂರು, ಜೂ.6-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸದಸ್ಯ ಸ್ಥಾನಗಳು ಹಾಗೂ ವಿಧಾನ ಪರಿಷತ್‌ನ 7 ಸದಸ್ಯ ಸ್ಥಾನಗಳ ಆಯ್ಕೆಗೆ ನಡೆಯುವ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿದೆ.
ಆದರೂ ಪ್ರತಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತಮ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಪ್ರಕಟಿಸಿಲ್ಲ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಆಯ್ಕೆಯಾಗಿಲ್ಲ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಿದೇಶ ಪ್ರವಾಸದಿಂದ ಮರಳಿದ ಬಳಿಕ ಬಿಜೆಪಿ ನಾಯಕರೊಂದಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಿದ್ದಾರೆ.
ನಾಳೆ ಸಂಜೆಯೊಳಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದ್ದು, ಸೋಮವಾರ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಿಗೆ ಎನ್‌ಡಿಎ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಆಡಳಿತಾರೂಢ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಈ ಎರಡೂ ಚುನಾವಣೆಗಳಿಗೆ ಅಧಿಕೃತವಾಗಿ ಪ್ರಕಟಿಸಿದೆ. ಅಭ್ಯರ್ಥಿಗಳು ತಮ ಉಮೇದುವಾರಿಕೆಯನ್ನು ಸಲ್ಲಿಸತೊಡಗಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮರು ಆಯ್ಕೆ ಬಯಸಿ ನಿನ್ನೆ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ ನಾಮ ಪತ್ರ ರಾಜ್ಯಸಭೆ ಚುನಾವಣೆಗೆ ಸಲ್ಲಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಮರು ಆಯ್ಕೆ ಬಯಸಿ ಇಂದು ತಮ ಉಮೇದುವಾರಿಕೆ ವಿಧಾನ ಪರಿಷತ್ ಚುನಾವಣೆಗೆ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ, ಈರಣ್ಣ ಕಡಾಡಿ, ನಾರಾಯಣ ಕೊರಗಪ್ಪ ಅವರು ರಾಜ್ಯಸಭೆ ಸದಸ್ಯ ಸ್ಥಾನದಿಂದ ಜೂ.25ರಂದು ನಿವೃತ್ತಿಯಾಗಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ನಸೀರ್ ಅಹದ್, ಎಂ.ಟಿ.ಬಿ.ನಾಗರಾಜು, ಪ್ರತಾಪಸಿಂಹ ನಾಯಕ್ ಕೆ., ತಿಪ್ಪಣ್ಣಪ್ಪ, ಸುನೀಲ್ ವಲ್ಯಾಪುರ್, ಬಿ.ಕೆ.ಹರಿಪ್ರಸಾದ್ ಅವರು ಜೂ.30ರಂದು ನಿವೃತ್ತಿಯಾಗಲಿದ್ದಾರೆ.
ಇವರ ನಿವೃತ್ತಿಯಿಂದ ತೆರವಾಗುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಗಳ ಆಯ್ಕೆಗೆ ಭಾರತದ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.ಜೂ. 9ರಂದು ನಾಪಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಜೂ. 11ರವರೆಗೆ ಅವಕಾಶವಿದೆ. ಜೂ.18ರಂದು ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ನ ಚುನಾವಣೆಗಳ ಮತದಾನ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯ ವರೆಗೆ ವಿಧಾನಸೌಧದಲ್ಲಿ ನಡೆಯಲಿದ್ದು, ಮತದಾನ ಮುಗಿದ ಬಳಿಕ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯಸಭೆ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ ಹಾಗೂ ಮನ್ಸೂರ್ ಅಲಿ ಖಾನ್ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ.ಮೋಹನ್ ಹಾಗೂ ಶಿವಣ್ಣ ಮಳವಳ್ಳಿ ಹಾಗೂ ವಿನಯ್ ಕಾರ್ತಿಕ್ ಕಾಂಗ್ರೆಸ್ ಅಭ್ಯರ್ಥಿಗಳಾದ್ದಾರೆ.
ವಿಧಾನ ಪರಿಷತ್ 7 ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ ಎರಡು, ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಆದರೆ, ಜೆಡಿಎಸ್‌ಗೆ ಒಂದು ಸ್ಥಾನ ಪಡೆಯಲು ಅಗತ್ಯವಿರುವಷ್ಟು ಶಾಸಕರ ಸಂಖ್ಯಾಬಲವಿಲ್ಲ. ಕಾಂಗ್ರೆಸ್ ಐವರು ಅಭ್ಯರ್ಥಿಗಳನ್ನು ಮೇಲನೆ ಚುನಾವಣೆಗೆ ಪ್ರಕಟಿಸಿದ್ದು, 7ನೇ ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ರಹಸ್ಯ ಮತದಾನವಾಗಿರುವುದರಿಂದ ಅಡ್ಡಮತದಾನವಾಗುವುದನ್ನು ತಳ್ಳಿ ಹಾಕುವಂತಿಲ್ಲ.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಲಿವೆ. ಆದರೆ, ಗೆಲ್ಲಲ್ಲು ಸಾಧ್ಯವಾಗುವಷ್ಟು ಶಾಸಕರ ಸಂಖ್ಯಾಬಲ ಇಲ್ಲದಿರುವುದರಿಂದ ಜೆಡಿಎಸ್ ಅಭ್ಯರ್ಥಿಯನ್ನು ರಾಜ್ಯಸಭೆ ಚುನಾವಣೆಗೆ ಕಣಕ್ಕಿಳಿಸದಿರಲು ನಿರ್ಧರಿಸಿದೆ.
ಒಂದು ವೇಳೆ ಬಿಜೆಪಿ ನಾಯಕರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯಸಭೆಗೆ ಮರು ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ಅವಕಾಶ ಮಾಡಿಕೊಟ್ಟರೆ ಮಾತ್ರ ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ. ದೇವೇಗೌಡರು ಮರು ಆಯ್ಕೆಯಾಗಿ ರಾಜ್ಯಸಭೆಗೆ ಹೋಗಬೇಕು ಎಂಬ ಒತ್ತಾಸೆ ಅವರ ಅಭಿಮಾನಿಗಳು ಹಾಗೂ ಜೆಡಿಎಸ್ ಮುಖಂಡರಲ್ಲಿ ತೀವ್ರವಾಗಿದೆ.
