Homeರಾಜ್ಯಐಶ್ವರ್ಯ ಮಾಲ್‌ ಕಟ್ಟಡ ನಿರ್ಮಾಣದಲ್ಲಿ ಭಾರಿ ಗೋಲ್ಮಾಲ್ : ಇಡಿ, ಲೋಕಾಯುಕ್ತಕ್ಕೆ ದೂರು

ಐಶ್ವರ್ಯ ಮಾಲ್‌ ಕಟ್ಟಡ ನಿರ್ಮಾಣದಲ್ಲಿ ಭಾರಿ ಗೋಲ್ಮಾಲ್ : ಇಡಿ, ಲೋಕಾಯುಕ್ತಕ್ಕೆ ದೂರು

Huge scam in Aishwarya Mall construction: Complaint to ED, Lokayukta

ಬೆಂಗಳೂರು, ಜೂ.11- ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ರಸ್ತೆಯಲ್ಲಿರುವ ಐಶ್ವರ್ಯ ಮಾಲ್‌ ಕಟ್ಟಡ ನಿರ್ಮಾಣದಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್‌.ಆರ್‌ ರಮೇಶ್‌ ಅವರು ಈ ಸಂಬಂಧಿತ ಅಧಿಕಾರಿಗಳು ಮತ್ತು ನಿರ್ಮಾಣ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರಿಗೆ ದೂರು ನೀಡಿದ್ದಾರೆ.

ನಗರಾಭಿವೃದ್ಧಿ ಇಲಾಖೆ, ಮುಖ್ಯ ಆಯುಕ್ತರು ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಅವರು, ಮಾಲ್‌ ನಿರ್ಮಾಣದಲ್ಲಿ ನಡೆದಿರುವ ಅಕ್ರಮಗಳ ಮಾಹಿತಿ ನೀಡಿದ್ದಾರೆ. ಮಂಜೂರಾತಿ ಪಡೆದ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ, ಆಸ್ತಿ ತೆರಿಗೆ ವಂಚನೆ ಸೇರಿದಂತೆ ಹಲವು ಗಂಭೀರ ವಂಚನೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕೆ.ಜಿ. ರಸ್ತೆಯಲ್ಲಿರುವ ಗುಪ್ತಾ ಮಾರ್ಕೆಟ್‌ ಜಾಗವು ಮೂಲತಃ ಸರ್ಕಾರದ ಸ್ವತ್ತಾಗಿದ್ದು, 1953-54ರಲ್ಲಿ 99 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲಾಗಿತ್ತು. ಬಳಿಕ ಈ ಸ್ವತ್ತನ್ನು ಕಾನೂನುಬಾಹಿರವಾಗಿ ಖರೀದಿಸಿ, ಐಶ್ವರ್ಯ ಹೇರಿಹೈಟ್ಸ್ ಇನ್ಪೋ ಪ್ರವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಪ್ರಕಾರ, 5 ತಳಮಹಡಿ, ನೆಲ ಅಂತಸ್ತು ಹಾಗೂ 5 ಮೇಲಂತಸ್ತುಗಳೊಂದಿಗೆ ಒಟ್ಟು 11 ಅಂತಸ್ತಿನ ಕಟ್ಟಡಕ್ಕೆ ಮಾತ್ರ ಅನುಮತಿ ದೊರೆತಿದ್ದರೂ, ಪ್ರಸ್ತುತ 5 ತಳಮಹಡಿ, ನೆಲ ಅಂತಸ್ತು ಮತ್ತು 7 ಮೇಲಂತಸ್ತುಗಳೊಂದಿಗೆ 13 ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಜೂರಾತಿ ಪ್ರಕಾರ 3.28 ಲಕ್ಷ ಚದರ ಅಡಿ ನಿರ್ಮಾಣಕ್ಕೆ ಅವಕಾಶವಿದ್ದರೂ, ಸುಮಾರು 3.86 ಲಕ್ಷ ಚದರ ಅಡಿ ಕಟ್ಟಡ ನಿರ್ಮಿಸಲಾಗಿದ್ದು, 57,781 ಚದರ ಅಡಿ ಹೆಚ್ಚುವರಿ ನಿರ್ಮಾಣ ನಡೆದಿದೆ ಎಂದು ಅವರು ಹೇಳಿದ್ದಾರೆ.

ಬಿದರಹಳ್ಳಿ, ರಾಂಪುರ ಹಾಗೂ ಬಿ.ಕೆ.ಹಳ್ಳಿ ಪ್ರದೇಶಗಳಿಂದ ಪಡೆದ ಡಿಆರ್‌ಸಿಗಳನ್ನು ಮೆಜೆಸ್ಟಿಕ್‌ನ ಎ ವಲಯದಲ್ಲಿ ಬಳಸಲಾಗಿದೆ. ಸಿ ವಲಯದ ಡಿಆರ್‌ಸಿಗಳನ್ನು ಎ ವಲಯದಲ್ಲಿ ಬಳಸುವಾಗ ಶೇ.30 ರಷ್ಟು ಕಡಿತ ಮಾಡುವ ಕಾನೂನು ಅನ್ವಯಿಸಬೇಕಾಗಿದ್ದರೂ, ಅದನ್ನು ಪಾಲಿಸದೆ ಸುಮಾರು 352.72 ಶೇಕಡಾ ವ್ಯತಿರಿಕ್ತ ನಿರ್ಮಾಣ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು 2018ರಿಂದಲೇ ಹಲವು ಬಾರಿ ದೂರುಗಳನ್ನು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿರುವ ರಮೇಶ್‌ ಅವರು ಕಟ್ಟಡಕ್ಕೆ ಯಾವುದೇ ಕಾರಣಕ್ಕೂ ಸ್ವಾಧಿನ ಪತ್ರ (ಒಸಿ) ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಆದರೆ, ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಜಂಟಿ ಆಯುಕ್ತರು 2026ರ ಮಾರ್ಚ್‌ 7ರಂದು ಸುಮಾರು 27.91 ಕೋಟಿ ಮೊತ್ತದ ಡಿಮ್ಯಾಂಡ್‌ ನೋಟಿಸ್‌‍ ನೀಡಿ, ಹಣ ಪಾವತಿಸಿ ಒಸಿ ಪಡೆಯುವಂತೆ ಸೂಚಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ದೂರಿದ್ದಾರೆ.

ಸುಮಾರು 3.86 ಲಕ್ಷ ಚದರ ಅಡಿ ನಿರ್ಮಾಣವಾಗಿದ್ದರೂ, ಕೇವಲ 6,500 ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಮಾತ್ರ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ದಾಖಲಿಸಿ ತೆರಿಗೆ ಪಾವತಿಸಲಾಗಿದೆ. ಇದರಿಂದ ಪಾಲಿಕೆಗೆ ಭಾರೀ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ನಗರ ಯೋಜನೆ ಹಾಗೂ ಕಂದಾಯ ವಿಭಾಗದ ಕೆಲ ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸುವಂತೆ ಇಡಿ ಮತ್ತು ಲೋಕಾಯುಕ್ತಕ್ಕೆ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿದೆ ಎಂದು ರಮೇಶ್‌ ತಿಳಿಸಿದ್ದಾರೆ.ಅಲ್ಲದೆ, ಕಟ್ಟಡಕ್ಕೆ ನೀಡಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

RELATED ARTICLES

Latest News